ಧಾರವಾಡ : ಬೆಂಗಳೂರಿನ ಡಿಜೆಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಯನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಗಲಾಟೆಯ ಆರೋಪಿಯೋರ್ವನಿಗೆ ಐಸಿಸ್ ನಂಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗಲಭೆಯ ಆರೋಪಿಯೊಬ್ಬನಿಗೆ ಐಸಿಸ್ ನಂಟು ಇರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ. ಈ ರೀತಿಯ ಗಲಾಟೆಯ ಸಾಕಷ್ಟು ಪ್ರಕ್ರಿಯೆಗಳು ನಮ್ಮ ಕರ್ನಾಟಕದಲ್ಲಿ ಆಗಿವೆ. ಈಗ ಅದೆನ್ನೆಲ್ಲವನ್ನೂ ಶೋಧನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಗಲಾಟೆಗಳು ನಡೆದ ಬಳಿಕ ಮಾತ್ರವೇ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಜಾಗೃತ ಆಗುತ್ತದೆ ಎಂದು ಮುತಾಲಿಕ್, ನಿತ್ಯ 24 ಗಂಟೆಯೂ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಕಣ್ಣು, ಕಿವಿ ತೆರೆದು ಕೆಲಸ ಮಾಡಬೇಕಿದೆ. ಇಂಥಹ ಧಂಗೆಕೋರರನ್ನು ಹದ್ದುಬಸ್ತಿನಲ್ಲಿಡಬೇಕಿದೆ. ಇಲ್ಲದೇ ಹೋದಲ್ಲಿ ಮುಂದೆ ಅನಾಹುತಗಳು ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.








