ವಯಸ್ಸಿನಲ್ಲಿ ಏನಿದೆ.. ಇರುವುದೆಲ್ಲ ಮನಸ್ಸಿನಲ್ಲಿ..
ಬಾಲ್ಯದ ಹುಡುಗಾಟದ ಹಂತವನ್ನು ಕಳೆದು ಯೌವನದ ಹೋರಾಟವನ್ನು ದಾಟಿ, ಹಿರಿಯ ನಾಗರಿಕರ ರಂಗವನ್ನು ಏರಿದ ನನಗೆ ಕಳೆದ ಬಾಳನ್ನು ಹಿಂತಿರುಗಿ ನೋಡುವ ತವಕ..

ನಡೆದು ಬಂದ ದಾರಿ ಕಡೆಗೆ ಕಣ್ಣ ಹೊರಳಿಸಬೇಡ… ಮುಂದೆ ನೋಡ ಸಾಲು ಸಾಲು ಡೇರ.. ಕವಿವಾಣಿ ಹಿಂದೆ ನೋಡದಂತೆ ಪ್ರೇರೇಪಿಸಿದರೂ ಮನಸ್ಸುಮಾಯಾಜಾಲ. ಬೇಡವೆಂದ ಕಡೆಗೇ ತಿರುಗುವುದು. ಕಡಿದ ಎಳೆಗಳನ್ನು ಜೋಡಿಸಿ ಅದನ್ನು ಹೊಸದಾಗಿ ನವಿರಾದ ಎಳೆಗಳಿಂದ ಮತ್ತೊಮ್ಮೆ ನೇಯುವ ಬಯಕೆ. ಬದುಕಿನ ಕ್ಷಣಗಳನ್ನು ಬಣ್ಣದ ಚಿತ್ತಾರದಲ್ಲಿ ಹೊಸದಾಗಿ ಚಿತ್ರಿಸುವ ಆಸೆ. ನಿವೃತ್ತಿಯ ನಂತರದ ಬದುಕನ್ನು ಕಲ್ಪನಾ ಲೋಕದಲ್ಲಿ ಚಿತ್ರಿಸಿಕೊಂಡದ್ದನ್ನು ನನಸಾಗಿಸುವ ತವಕ.

ಬೆಳಗೆದ್ದು ಕಾಲೇಜಿಗೆ ಓಡುವ ಧಾವಂತದ ಬದುಕು ಈಗಿಲ್ಲ. ದಿನವೆಲ್ಲವೂ ನನ್ನದು.ಕನ್ನಡಿಯಲ್ಲಿ ಕಾಣುವ ನನ್ನ ಬಿಂಬಕ್ಕೆ ಆಲಸ್ಯದ ಎಳೆ ನನ್ನ ಮೊಗದಲ್ಲಿ ಕಾಣದಂತೆ ವೃದ್ಧಾಪ್ಯದ ಎಲ್ಲ್ಲಾ ರೇಖೆಗಳನ್ನು ಮುಚ್ಚಿಡುವ ತವಕ. ಎಳೆಯರೊಂದಿಗಿನ ಒಡನಾಟದಲ್ಲಿ ಬದುಕನ್ನು ಹೊಸದಾಗಿ ಕಟ್ಟುವ ಪುಳಕ. ಬದುಕಿನ ಪ್ರಯಾಣದಲ್ಲಿ ಕ್ರಮಿಸಿದ ಮಾರ್ಗದಲ್ಲಿ ತಮ್ಮ ನಿಲ್ದಾಣದಲ್ಲಿ ಇಳಿದು ಹೋದ ಗೆಳತಿಯರನ್ನು ನೆನಪಿಸಿ ಅವರೊಂದಿಗೆ ಪ್ರಯಾಣದ ರಸ ನಿಮಿಷಗಳನ್ನು ಮೆಲುಕು ಹಾಕುತ್ತಾ ಕಳೆಯುವುದು ದಿನಚರಿ. ನಗುನಗುತಾ ನಲಿ ನಲಿ ಎಲ್ಲಾ ದೇವನ ಕಲೆ ಎಂದೇ ನೀ ತಿಳಿ.ಹಾಡನ್ನು ಮೆಲುಕು ಹಾಕುತ್ತಾ ಕಾಣದ ಆ ದೈವ ನನ್ನನ್ನು ಆಡಿಸಲಿರುವ ಪರಿ ಯಾವ ರೀತಿ ಇರಬಹುದು ಎಂದು ಕಾಣದ ಆ ದೈವಕ್ಕೆ ಶರಣು ಎನ್ನುತ್ತೇನೆ.
ಮಿತ್ರಪ್ರಭಾ ಹೆಗ್ಡೆ, ಕಾರ್ಕಳ








