ನವದೆಹಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಇವರ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತ್ತು. ಇದೀಗ ಮತ್ತೆ ಪಕ್ಷದಲ್ಲಿ ಉತ್ತರಾಧಿಕಾರಿಯ ಪ್ರಶ್ನೆ ಎದಿದ್ದು, “ಕಾಂಗ್ರೆಸ್ ಗೆ ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ಪ್ರಿಯಾಂಕಾ ಗಾಂಧಿ ಸಂಪೂರ್ಣ ಬೆಂಬಲ ನೀಡಿದ್ದಾರೆ.
‘ಇಂಡಿಯಾ ಟುಮಾರೋ: ಭಾರತದ ಮುಂದಿನ ತಲೆಮಾರಿನ ರಾಜಕೀಯ ನಾಯಕರ ಜೊತೆಗಿನ ಮಾತುಕತೆ’ ಎಂಬ ಪುಸ್ತಕಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡುತ್ತ, “ನಮ್ಮ ಕುಟುಂಬ ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕಾಂಗ್ರೆಸ್ ಪಕ್ಷ ತನ್ನದೇ ದಾರಿಯಲ್ಲಿ ಸಾಗಬೇಕು. ಅದಕ್ಕೆ ನಮ್ಮ ಕುಟುಂಬಕ್ಕೆ ಸೇರಿರದ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನನಗೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂಡಮಾನ್ ನಿಕೋಬರ್ ಗೆ ಹೋಗಲು ಸಿದ್ಧ
ಸಂದರ್ಶನದಲ್ಲಿ ಮಾತನಾಡುತ್ತ ಪ್ರಿಯಾಂಕಾ, ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಒಂದು ವೇಳೆ ನಮ್ಮ ಪಕ್ಷದ ಅಧ್ಯಕ್ಷರಾಗುವವರು ‘ನೀನು ಉತ್ತರ ಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ, ಅಂಡಮಾನ್ ನಿಕೋಬಾರ್ ಗೆ ಹೋಗು’ ಎಂದು ಹೇಳಿದರೂ ನಾನು ಸ್ವೀಕರಿಸಲು ಸಿದ್ಧಳಿದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರು ಯಾರೇ ಆದರೂ ಅವರ ಆದೇಶವನ್ನು ನಾನು ಖಂಡಿತ ಪಾಲಿಸುತ್ತೇನೆ ಎಂದು ತಿಳಿಸಿದ್ದಾರೆ.









