ಕರ್ನಾಟಕದ ಹಿರಿಯ ಕ್ರಿಕೆಟಿಗ, ಬಿಸಿಸಿಐನ ಮಾಜಿ ಪಿಚ್ ಕ್ಯುರೇಟರ್ ಗೋಪಾಲಸ್ವಾಮಿ ಕಸ್ತೂರಿ ರಂಗನ್ ಅವರು ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕೇವಲ ಕ್ರಿಕೆಟ್ ಆಟಗಾರನಾಗಿ ಮಾತ್ರವಲ್ಲದೆ ಕ್ರಿಕೆಟ್ ನಿರ್ವಾಹಕರಾಗಿಯೂ ಕಸ್ತೂರಿ ರಂಗನ್ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಜೊತೆಗೆ ಬಿಸಿಸಿಐನ ಪಿಚ್ ಕ್ಯುರೇಟರ್ ಆಗಿ ಸಾಕಷ್ಟು ಖ್ಯಾತಿಯನ್ನು ಹೊಂದಿದ್ದರು.
ಗೋಪಾಲಸ್ವಾಮಿ ಅವರು 1948 ರಿಂದ 1963ರ ಅವಧಿಯಲ್ಲಿ ಮೈಸೂರು ತಂಡದ ಪ್ರಮುಖ ಬಲಗೈ ವೇಗದ ಬೌಲರ್ ಆಗಿ ಮಿಂಚಿದ್ದರು.
ಮಾಜಿ ರಣಜಿ ಕ್ರಿಕೆಟಿಗ, ಕೆಎಸ್ಸಿಎ ಉಪಾಧ್ಯಕ್ಷ ಮತ್ತು ಬಿಸಿಸಿಐ ಕ್ಯುರೇಟರ್ ಶ್ರೀ ಜಿ ಕಸ್ತೂರಿ ರಂಗನ್ ಹಠಾತ್ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸಂತಾಪ ಸಂದೇಶದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.









