ಅಂತರ್ರಾಷ್ಟ್ರೀಯ ಸಹಾಯ ಸಹಕಾರಗಳಿದ್ದರೆ ಎಂಥ ಕೆಲಸವನ್ನಾದರೂ ಸಾಧಿಸಬಹುದು ಅನ್ನೋದಕ್ಕೆ ಕಳೆದ ಶತಮಾನದ ರಾಮ್ಸೆ ದೇವಾಲಯದ ಪುನರುತ್ಥಾನವು ಜ್ವಲಂತ ಸಾಕ್ಷಿ ಎನ್ನಬಹುದು. ಈಜಿಪ್ಟಿನ ರಾಮ್ಸೆ ದೇವಾಲಯದ ಬಗ್ಗೆ ನೀವು ಕೇಳಿದ್ದಿರಬಹುದು. ಇವು ಈಜಿಪ್ಟಿನ ನಾಸರ್ ಸರೋವರದ ಪಶ್ಚಿಮ ದಡದ ಮೇಲೆ ಸುಡಾನ್ ಗೆ ಅಂಟಿಕೊಂಡು ನಿಂತಿರುವ ಅಬು ಸಿಂಬೆಲ್ ನ ಹತ್ತಾರು ಬೃಹತ್ ದೇವಾಲಯಗಳ ಪೈಕಿ ಇರುವ ಬೃಹತ್ ದೇವಾಲಯಗಳ ಒಂದು ಬೆಲ್ಟ್. ಕ್ರಿ.ಪೂ 13 ನೇ ಶತಮಾನದಲ್ಲಿ ಅಥವಾ ಇಲ್ಲಿಂದ ಸುಮಾರು 3500 ವರ್ಷಗಳ ಹಿಂದೆ ಈಜಿಪ್ಟಿನ ಪ್ರಮುಖ ಅರಸನಾದ ಎರಡನೇ ರಾಮ್ಸೇಯಿಂದ ಇವು ಸ್ಥಾಪನೆಯಾದವು ಎನ್ನಲಾಗಿದೆಯಾದರೂ ಅಬು ಸಿಂಬೆಲ್ ಪ್ರಾಂತ್ಯದ ಇನ್ನು ಹಲವು ದೇವಾಲಯಗಳು ಇದಕ್ಕೂ ಬಹಳ ಹಿಂದೆಯೇ ರಚಿಸಲ್ಪಟ್ಟಿವೆ.
ಫರೋಗಳ ಹತ್ತೊಂಭತ್ತನೆ ರಾಜವಂಶದವನಾದ ಎರಡನೇ ರಾಮ್ಸೇ ದೊರೆ ಈಜಿಪ್ಟಿನ ಫರೋಗಳಲ್ಲೇ ಅತ್ಯಂತ ಪ್ರಬಲ ಹಾಗೂ ಪ್ರಮುಖ ಅರಸನಾಗಿದ್ದವ. ಇವನ ಪತ್ನಿಯೇ ನೆಫರ್‌ತಿತಿ. ಇವರಿಬ್ಬರ ಮಗನೆ ಟುಟನ್ ಖಾಮುನ್ ಯುವರಾಜ. ಈ ಯುವರಾಜ ಸಣ್ಣ ವಯಸಲ್ಲೇ ಸೊಳ್ಳೆ ಕಡಿತದಿಂದ ನಿಧನನಾಗ್ತಾನೆ. ಇವನ ಚಿನ್ನದ ಪುತ್ಥಳಿಯೊಂದು ಇತ್ತೀಚೆಗೆ ಈಜಿಪ್ಟಿನ ಪಿರಮಿಡ್ ನಲ್ಲಿ ಪತ್ತೆಯಾಗಿದೆ. ಟುಟನ್ ಖಾಮುನ್ ಅತ್ಯಂತ ಕಿರಿಯ ಫರೊ ಆಗಿದ್ದವ ಹಾಗೂ ಫರೋಗಳಲ್ಲೆ ಅತ್ಯಂತ ದುಬಾರಿ ವೆಚ್ಚದ ಅರಸ. ರಾಮ್ಸೆ ದೊರೆಯ ಪರಿವಾರದ ಬಗೆಗೆ ಅನೇಕ ಊಹಾಪೋಹಗಳಿವೆ. ಒಟ್ಟಾರೆ ರಾಮ್ಸೆ ಬಹಳ ಧಾರ್ಮಿಕ ಪ್ರಜ್ಞೆಯುಳ್ಳ ಅರಸನಾಗಿದ್ದ. ಅಬು ಸಿಂಬೆಲ್ ಪ್ರಾಂತ್ಯದಲ್ಲಿ ರಾಮ್ಸೆ ಅನೇಕ ದೇವಾಲಯಗಳನ್ನ ನಿರ್ಮಿಸಿದ. ಅಲ್ಲಿನ ಸಣ್ಣ ದೇವಾಲಯಗಳನ್ನ ತನ್ನ ಪತ್ನಿ ನೆಫರ್ ತಿತಿಗೆ ಹಾಗು ಮಗ ಟುಟನ್ ಖಾಮೆನ್ ಗೆ ಅರ್ಪಿಸಿದ.
ನಾಸರ್ ಸರೋವರದ ದಡದಲ್ಲಿ ಅವನ ಹೆಸರಿನಲ್ಲೇ ಅವನ ರಾಜ ಪುರುಷರ ಕುಳಿತ ಭಂಗಿಗಳ ರಚನೆ ಮಾಡಿ ಅದಕ್ಕೆ ಎರಡನೇ ರಾಮ್ಸೆ ದೇವಾಲಯ ಎಂದು ಹೆಸರಿಟ್ಟ. ಇದರಲ್ಲಿರುವ ಮೊದಲ ವಿಗ್ರಹ ದೊರೆ ಎರಡನೆ ರಾಮ್ಸೇಯದು, ಹಾಗೂ ನಂತರದ ಮೂರು ಬೃಹತ್ ವಿಗ್ರಹಗಳು ಈಜಿಪ್ಟಿಯನ್ನರ ಪುರಾತನ ಅಧಿದೇವತೆಗಳಾದ ಅಮುನ್, ರಾ ಹೊರಾಕ್ಟಿ ಹಾಗೂ ಟಾ ದೇವತೆಯರದ್ದು. ಇಲ್ಲಿ ರಾಮ್ಸೇ ತನ್ನನ್ನು ತಾನು ಶಕ್ತಿದೇವತೆಗಳ ಸಮನಾಗಿ ಬಿಂಬಿಸಿಕೊಂಡಿದ್ದಾನೆ. ಈ ಒಂದೊಂದೂ ಬೃಹತ್ ವಿಗ್ರಹಗಳು ಸುಮಾರು 300 ಅಡಿಗಳಷ್ಟು ಉದ್ದ ಹಾಗೂ ಹೆಚ್ಚೂ ಕಡಿಮೇ ಅಷ್ಟೇ ಅಡಿ ಅಗಲ ಇವೆ. ಸಾಲಿಡ್ ರಾಕ್ ನಿಂದ ಹಾಗೂ ಬೆಟ್ಟವನ್ನೇ ಇಡಿಯಾಗಿ ಕಡಿದು ಈ ಅಸಾಧ್ಯ ರಾಮ್ಸೇ ದೇವಾಲಯವನ್ನ ಕೊರೆಯಲಾಗಿದೆ ! ಆಗಿನ ಈ ಇಂಜಿನಿಯರಿಂಗ್ ಇವತ್ತಿನ ಆಧುನಿಕತೆಯನ್ನೂ ಕೆಣಕುವಂತಿದೆ.
ಆದರೆ 1962ರಲ್ಲಿ ಈ ಇಡೀ ದೇವಾಲಯವನ್ನೇ ಅದರ ಮೂಲ ಜಾಗದಿಂದ ಕಿತ್ತು ಬೇರೆಡೆಗೆ ಕೂರಿಸುವ ಪ್ರಮೇಯ ಎದುರಾಗಿತ್ತು ಅನ್ನೋದು ನಿಮಗೆ ಗೊತ್ತೆ? ಹೌದು. ಇಡೀ ದೇವಾಲಯವನ್ನ ಅದರ ಮೂಲ ಜಾಗದಿಂದ ಬೇರ್ಪಡಿಸಿ ಬೇರೆ ಕಡೆ ಸಾಗಿಸುವುದು ಅನಿವಾರ್ಯವಾಗಿತ್ತು. ಇದು ಸಾಧ್ಯವೇ ಎಂಬ ಗೊಂದಲದಲ್ಲಿಯೇ ಕೆಲಸ ಆರಂಭಿಸಿದ ಇಜಿಪ್ಷಿಯನ್ ಸರ್ಕಾರ ಆ ಕೆಲಸದಲ್ಲಿ ಯಶಸ್ವಿಯೂ ಆಗಿ ಜಾಗತಿಕ ಮಟ್ಟದ ಶ್ಲಾಘನೆ ಪಡೆದದ್ದು ಇವತ್ತಿಗೆ ಇತಿಹಾಸವಾಗಿದೆ. ಏನಿದರ ಹಿನ್ನೆಲೆ ಗೊತ್ತೇ?
ಈಜಿಪ್ಟಿನ ತಾಯಿ ಎಂದೇ ಹೆಸರಾದ ಅಲ್ಲಿನ ನಾಗರೀಕತೆಯ ಬೇರು ಎಂದೇ ಖ್ಯಾತನಾಮವಾದ ನೈಲ್ ನದಿಯ ಬಗ್ಗೆ ನಿಮಗೆ ಗೊತ್ತಲ್ವ? ಈ ನದಿ ನೀರು ಅಲ್ಲಿನ ಸಾವಿರಾರು ಜನರ ಪಾಲಿಗೆ ಕೇವಲ ನೀರಲ್ಲ ಅದೊಂದು ಜೀವಜಲ. ಎಷ್ಟೊ ಜನ ರೈತರಿಗೆ ಈ ನೀರೇ ಆಧಾರವಾಗಿದೆ. ಇದು ಸಹಸ್ರಾರು ಮೈಲುಗಳ ಉದ್ದ ಹರಿಯುವ ಅಗಾಧ ನದಿಯಾದ್ದರಿಂದ ಇದಕ್ಕೆ ಒಂದು ಅಣೆಕಟ್ಟು ಎಂಬುದೇ ಇರಲಿಲ್ಲ. ಈ ಒಂದೇ ಕಾರಣಕ್ಕೆ ಸಾಕಷ್ಟು ಈ ನೀರಿನ ಬಳಕೆ ವ್ಯವಸ್ಥಿತವಾಗಿ ಸಾಗದೆ ಇದು ಇಜಿಪ್ಟಿಗೆ ಅನೇಕ ಕ್ಷಾಮಡಾಮರಗಳನ್ನ ತಂದೊಡ್ಡಿ ಅದರ ಕರಾಳ ಇತಿಹಾಸಕ್ಕೆ ಕಾರಣವಾಗಿದೆ. ಕ್ರಿ.ಶ ಹನ್ನೆರಡನೇ ಶತಮಾನದಲ್ಲೊಮ್ಮೆ ಈಜಿಪ್ಟಿನ ಕಲೀಫನಾಗಿದ್ದ ಅಲ್ ಹಕೀಮ್ ಬಿ ಅಮ್ರಲ್ಲಾನಿಂದ ನೈಲ್ ನದಿಯ ನೆರೆಹಾವಳಿಯ ಅಧ್ಯಯನಕ್ಕೆಂದು ನೇಮಕನಾಗಿದ್ದ ಅರಬ್ ಮೂಲದ ಜಲತಜ್ಞ ಇಬ್ನ್ ಹಲ್ ಹಾಯ್ತಾಮ್ ನಿಂದ ಮೊದಲ ಬಾರಿಗೆ ಅಲ್ಲಿನ ಅಸ್ವಾನ್ ಅಣೆಕಟ್ಟು ಕಟ್ಟುವ ಬಗ್ಗೆ ಪ್ರಯತ್ನ ನಡೆದಿತ್ತಾದರೂ ನದಿಯ ರಾಕ್ಷಸತ್ವದ ಮುಂದೆ ತನ್ನ ತಿಳುವಳಿಕೆ ಹಾಗು ಪ್ರಯತ್ನ ತೃಣವೆಂದು ಆತ ಆ ಯೋಜನೆ ಕೈಬಿಟ್ಟಿದ್ದ. ನಂತರ ಬ್ರಿಟೀಷ್ ಕಾಲದವರೆಗೂ ನೆನೆಗುದಿಗೆ ಬಿದ್ದ ಈ ನದಿ ಯೋಜನೆ 1898 ರಲ್ಲಿ ಮುನ್ನೆಲೆಗೆ ಬಂತು. ಅಸ್ವಾನ್ ಬಳಿಯ ಕಿರು ಡ್ಯಾಮ್ ಕಟ್ಟುವ ಬಗ್ಗೆ ಅಂದಿನ ಬ್ರಿಟೀಷ್ ಆಡಳಿತದ ಇಜಿಪ್ಟ್ ಸರ್ಕಾರ ಚಿಂತಿಸಿತು.
ಸರ್ ವಿಲಿಯಂ ವಿಲ್‌ಕಾಕ್ಸ್ ಎಂಬ ಇಂಜಿನಿಯರ್ ನ ನಾಯಕತ್ವದಲ್ಲಿ 1898 ರಲ್ಲಿ ಆರಂಭವಾದ ಕಿರು ಡ್ಯಾಮ್ ನ ಕಾರ್ಯಾರಂಭ 1902 ರ ಡಿಸೆಂಬರ್ ನಲ್ಲಿ ಕೊನೆಗೊಂಡಿತು. ಕಿರು ಡ್ಯಾಮ್ ಏನೊ ಪೂರ್ಣವಾಯ್ತು ಆದರೆ ಮುಖ್ಯವಾಗಿ ಆಗಬೇಕಿದ್ದ ಆಸ್ವಾನ್ ಮುಖ್ಯ ಡ್ಯಾಮ್ ಪುನಃ ಹಾಗೇ ಉಳಿಯಿತು. ಕಿರು ಡ್ಯಾಮ್ ನ ಮುಕ್ತಾಯವು ದೊಡ್ಡ ಆಸ್ವಾನ್ ಡ್ಯಾಮ್ ಗೆ ಪ್ರೋತ್ಸಾಹದಾಯಕವಾಗಿದ್ದರೂ ದೊಡ್ಡ ಡ್ಯಾಮ್ ಕಟ್ಟುವ ಹೊಣೆಯನ್ನ ಅಂದಿನ ಬ್ರಿಟೀಷ್ ಸರ್ಕಾರ ವಹಿಸಿಕೊಳ್ಳಲಿಲ್ಲ. 1952 ರ ಈಜಿಪ್ಟ್ ಕ್ರಾಂತಿಯೂ ಸಹ ದೊಡ್ಡ ಡ್ಯಾಮ್ ಕಟ್ಟಬೇಕೆಂದು ಆಗ್ರಹಿಸಿತು. ಈ ನಡುವೆ ನಡೆದ ರಾಜಕೀಯ ಅರಾಜಕತೆ ಹಾಗೂ ನಿರಂತರವಾದ ಕೋಲ್ಡ್ ವಾರ್ ಗಳ ಫಲವಾಗಿ ಇಜಿಪ್ಟ್ ಬ್ರಿಟಿಷ್ ಹಾಗೂ ಇಸ್ರೇಲಿ ಕೊಲೊನಿಗಳ ನಡುವಿನ ದಾಳವಾಯ್ತು.
ಕಡೆಗೆ 56 ರಲ್ಲಿ ಬ್ರಿಟೀಷ್ ಹಾಗೂ ರಷ್ಯಾದ ಜತೆಗಿನ ಒಪ್ಪಂದಗಳ ಫಲವಾಗಿ ಇಜಿಪ್ಟಿನ ಪ್ರಭುತ್ವ ಸಾಧನೆಯಾಗಿ ನಾಸರ್ ಎಂಬುವವರು ಈಜಿಪ್ಟಿನ ಅಧ್ಯಕ್ಷರಾಗಿ ನೇಮಕರಾದರು. ನಾಸರ್ ಆಸ್ವಾನ್ ಅಣೆಕಟ್ಟು ಆಗಲೇಬೇಕೆಂಬ ಧೃಡ ನಿರ್ಧಾರದಿಂದಿದ್ದರು. ಆದರೆ ಅವರ ಪಟ್ಟದ ಬಳಿಕ ಕಾಟ ಕೊಡುತ್ತಿದ್ದ ಇಸ್ರೇಲಿ ದಾಳಿಕೋರರನ್ನ ಅವರು ಹತ್ತಿಕ್ಕಲೇಬೇಕಿತ್ತು. ಅಲ್ಲದೆ ಆಸ್ವಾನ್ ನದಿ ಯೋಜನೆ ಕೇವಲ ತನ್ನೊಬ್ಬನಿಂದ ಆಗುವ ಕೆಲಸವಲ್ಲ ಎಂದೂ ಅವರಿಗೆ ತಿಳಿದಿತ್ತು. ಕಡೆಗೆ ಬ್ರಿಟೀಷ್ ಹಾಗೂ ರಷ್ಯಾದ ಸೋವಿಯತ್ ಎರಡರ ಜತೆಯೂ ಸಮಾಲೋಚನೆ ನಡೆಸಿದ ನಾಸರ್ ಇಸ್ರೇಲಿ ಉಪಟಳವನ್ನ ತಣ್ಣಗೆ ಮಾಡುವ ಭರವಸೆ ಕೊಟ್ಟು ಎರಡೂ ರಾಷ್ಟ್ರಗಖ ಮಿತೃತ್ವ ಸಾಧಿಸಿದರು.
ಆಸ್ವಾನ್ ಅಣೆಕಟ್ಟಿಗೆ ಎರಡೂ ರಾಷ್ಟ್ರಗಳ ಸಾತ್ ಸಿಕ್ಕ ಬಳಿಕ ನಾಸರ್ ತಡ ಮಾಡದೆ ಅದರ ಹಳೆ ನಕ್ಷೆಗಳನ್ನ ಸಿದ್ಧ ಪಡಿಸಿ ಕಾರ್ಯಾರಂಭ ಶುರು ಮಾಡಿದರು. ಇನ್ನೇನು ಕೆಲಸ ಶುರುವಾಯ್ತೆಂಬ ಹೊತ್ತಿಗೆ ಹೊಸ ತಲೆನೋವು ಶುರುವಾಯ್ತು. ಆಸ್ವಾನ್ ಅಣೆಕಟ್ಟು ಕಟ್ಟುವ ಮುನ್ನ ಅಬು ಸಿಂಬೆಲ್ ದೇವಾಲಯಗಳನ್ನ ಅಣೆಕಟ್ಟಿನಿಂದುಂಟಾಗುವ ನೆರೆ ಹಾವಳಿಯಿಂದ ರಕ್ಷಿಸುವುದು ಅವರ ಮೊದಲ ಕರ್ತವ್ಯವಾಗಿತ್ತು. ಇಲ್ಲವಾದರೆ ಉಕ್ಕಿ ಬರುವ ನೀರಿನ ಹರಿವು ಈ ಸಾಂಸ್ಕೃತಿಕ ಪ್ರತೀಕಗಳಂತಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಭವ್ಯ ದೇವಾಲಯಗಳನ್ನ ನೀರು ಪಾಲು ಮಾಡುವುದು ನಿಶ್ಚಿತವಾಗಿತ್ತು. ಇಂಜಿನಿಯರ್ ಗಳು ಚಿಂತಿಸಿದರು. ಈಗವರು ದೇವಾಲಯಗಳನ್ನ ನಾಶ ಮಾಡುವಂತೆಯೂ ಇರಲಿಲ್ಲ. ಅವುಗಳನ್ನ ಸುರಕ್ಷಿತವಾಗಿ ಮೂಲ ಜಾಗದಿಂದ ಸುರಕ್ಷಿತ ಜಾಗಗಳಿಗೆ ಸಾಗಿಸಬೇಕಿತ್ತು ! ಆದರೆ ಹೇಗೆ?
ನೂರಾರು ಅಡಿ ಎತ್ತರವಿರುವ ಈ ಅಗಾಧ ತೂಕದ ವಿಗ್ರಹಗಳನ್ನ ಹೇಗೆ ಒಯ್ಯುವುದು ? ಇದು ಕನಸು ಬಿಡಿ ಎಂದು ಅವರೆಲ್ಲ ಕೈ ಚೆಲ್ಲಿದರೂ ಸಹ ನಾಸರ್ ಎದೆಗುಂದಲಿಲ್ಲ. ಇಡೀ ದೇವಾಲಯಗಳನ್ನೇ ಬೃಹತ್ ಗರಗಸಗಳಿಂದ ಕತ್ತರಿಸಿ. ಅವುಗಳನ್ನ ಸಾಗಿಸಿ ಬೇರೆಡೆ ಯಥಾವತ್ ಕೂರಿಸದೆ ವಿಧಿಯೇ ಇರಲಿಲ್ಲ. ಅಥವಾ ಈ ಕೆಲಸ ಕೈಬಿಟ್ಟೆನಾದರೆ ನನ್ನನ್ನೇ ನಂಬಿದ ನನ್ನ ದೇಶದ ರೈತರಿಗೆ ಅನ್ಯಾಯ ಮಾಡಿದಂತೆ. ಅಣೆಕಟ್ಟನ್ನೇ ಅವಲಂಬಿಸಿರುವ ಅವರ ಕೃಷಿಯ ಹೊಟ್ಟೆಯ ಮೇಲೆ ಹೊಡೆದಂತೆ ಎಂದು ಭಾವಿಸಿದ ನಾಸರ್ ಕೆಲಸ ಮುಂದು ಮಾಡಿಯೇ ಬಿಟ್ಟರು. ಕೆಲಸದ ಟೀಮ್ ಸಿದ್ಧವಾಯ್ತು. ಅವರೆಲ್ಲ ನುರಿತ ತಜ್ಞರೇ. ಎರಡನೇ ರಾಮ್ಸೆ ದೇವಾಲಯವೇ ಇಡೀ ಅಬು ಸಿಂಬೆಲ್ ಪ್ರಾಂತ್ಯದಲ್ಲಿ ಅವರಿಗಿದ್ದ ಬಹುದೊಡ್ಡ ಛಾಲೆಂಜ್. ಇದು ತನ್ನ ಹಿಂದಿರುವ ಅಗಾಧವಾದ ಬೆಟ್ಟವನ್ನೂ ಸಹ ಸಪೋರ್ಟ್‌ಗೆ ಬಳಸಿಕೊಂಡು ನಿಂತಿದ್ದ ರಕ್ಕಸ ದೇವಾಲಯ. ಬೃಹತ್ ಗರಗಸಗಳ ಮೂಲಕ ಈ ವಿಗ್ರಹಗಳ ಪಾರ್ಟ್ ಬೈ ಪಾರ್ಟ್ ಕತ್ತರಿಸಿ ಟನ್ ಗಟ್ಟಲೆ ತೂಗುವ ಆ ಒಂದೊಂದು ಪೀಸನ್ನೂ ಸಾವಕಾಶವಾಗಿ ಕೆಳಕ್ಕಿಳಿಸಿ ಅದಕ್ಕೊಂದು ನಂಬರ್ ಕೊಡುವುದು ಅವರ ಮೊದಲ ಕೆಲಸವೆಂದು ಒಪ್ಪಿತವಾಯ್ತು.
ನಂತರ ಸುರಕ್ಷಿತವಾದ ಜಾಗಕ್ಕೆ ಮೂಲ ಜಾಗದಲ್ಲಿರುವ ಅಗಾಧವಾದ ಬೆಟ್ಟವನ್ನ ಡೈನಾಮೈಟ್ ನಿಂದ ಸಿಡಿಸಿ ಅದರ ಚೂರುಗಳಿಂದಲೇ ಹೊಸ ಜಾಗದಲ್ಲಿ ನೈಸರ್ಗಿಕವಾದ ಬೆಟ್ಟದಂತಿರುವ ನಿರ್ಮಿತ ಬೆಟ್ಟವನ್ನ ಕಟ್ಟುವುದು ಎರಡನೇ ಟಾಸ್ಕ್. ನಂತರ ನಂಬರ್ ಗಳಿರುವ ಟನ್ ಗಟ್ಟಲೆ ತೂಗುವ ವಿಗ್ರಹಗಳ ಚೂರುಗಳನ್ನ ನಂಬರ್ ಪ್ರಕಾರವೇ ಒಂದರ ಪಕ್ಕ ಅಥವಾ ಮೇಲಕ್ಕೆ ಜೋಡಿಸಿ ಸಿಮೆಂಟ್ ಕಾಂಕ್ರೀಟ್ ಹಾಗೂ ರಾಡ್ ಬಳಸಿ ಅವುಗಳನ್ನ ಒತ್ತಾಗಿ ಜೋಡಿಸುವುದೇ ಅಂತಿಮ ಟಾಸ್ಕ್. ಸರಿ, 1962 ರಲ್ಲಿ ಇದಕ್ಕಾಗಿ ಒಂದು ದೊಡ್ಡ ಟೀಮ್ ರೆಡಿಯಾಗುತ್ತೆ. ಅಂದುಕೊಂಡಂತೆ ಬೃಹತ್ ಗರಗಸಗಳಿಂದ ವಿಗ್ರಹಗಳನ್ನ ಕತ್ತರಿಸಿ ಅಸಾಧಾರಣ ಸೈಜಿನ ಕ್ರೇನ್ ಗಳ ಮೂಲಕ ಕೆಳಗಿಳಿಸಿ ನಂಬರ್ ಬರೆದರು. ವಿಗ್ರಹಗಳ ಸಂಪೂರ್ಣ ಕತ್ತರಿಸುವಿಕೆ ಮುಗಿದ ಬಳಿಕ. ಬೆಟ್ಟವನ್ನ ಸ್ಫೋಟಿಸಲಾಯ್ತು. ಆ ಚೂರುಗಳನ್ನ ತಂದು ಹೊಸ ಜಾಗದಲ್ಲಿ ಬೃಹತ್ ಆರ್ಚ್ ಮಾದರಿ ರಚಿಸಲಾಯ್ತು. ನಂತರ ಸಂಖ್ಯಾನುಗುಣವಾಗಿ ಕತ್ತರಿಸಿದ ಪೀಸ್ ಗಳನ್ನ ಜೋಡಿಸಬೇಕಿತ್ತು. ಮುಖಗಳನ್ನ ಜೋಡಿಸಲು ಕಬ್ಬಿಣದ ರಾಡ್ ಗಳನ್ನ ತೂರಿಸಿ ಅಟ್ಯಾಚ್ ಮಾಡಿ ಸಿಮೆಂಟ್ ಹಾಕಿ ಅಂಟಿಸಿದರು. ಅಸಾಧ್ಯವಾದ ಈ ಮರುಜೋಡಣೆಯ ಕಾರ್ಯ ನಾಲ್ಕೇ ವರ್ಷಗಳಲ್ಲಿ ಮುಗಿದೇ ಹೋಯ್ತು. ಉಳಿದ ದೇವಾಲಯಗಳನ್ನೂ ಇದೇ ಮಾದರಿ ಮರುಜೋಡಿಸಲು ಹತ್ತು ವರ್ಷ ತಗುಲಿತು.
ಒಟ್ಟಾರೆ 1962 ರಲ್ಲಿ ಶುರುವಾದ ಈ ಸವಾಲಿನ ಯೋಜನೆ 1976 ರಲ್ಲಿ ಅಧಿಕೃತವಾಗಿ ಮುಗಿಯಿತು. ನಾಸರ್ ರವರ ಈ ಪ್ರಯತ್ನಕ್ಕೆ ದೇಶದ ಜನತೆ ಶ್ಲಾಘಿಸಿತು. ಈ ಯೋಜನೆ ಕಳೆದ ಶತಮಾನದ ಅತ್ಯಂತ ಬೃಹತ್ ನದಿ ಯೋಜನೆ ಎಂದೂ ಹೆಸರಾಯ್ತು. ಅಸ್ವಾನ್ ನದಿ ಯೋಜನೆಯಿಂದ ನಿಜಕ್ಕು ಉಪಕೃತರಾದವರು ಅಲ್ಲಿನ ರೈತರು. ಈಗವರು ಇದರ ಫಲವಾಗಿ ಎರಡು ವರ್ಷಕ್ಕಾಗುವಷ್ಟು ಬೆಳೆಯ ಫಸಲನ್ನ ಒಂದೇ ವರ್ಷದೊಳಗೆ ಬೆಳೆಯಬಲ್ಲರು. ಈ ಯೋಜನೆ ವಿದ್ಯುತ್ ಉತ್ಪಾದನೆಗು ಇಂಬು ಕೊಟ್ಟಿತು. ಈಗ ಹೊಸ ಜಾಗದಲ್ಲಿರುವ ರಾಮ್ಸೆ ದೇಗುಲವನ್ನ ನೀವು ನೋಡಿದರೆ ಅದು ಸಹಸ್ರಾರು ವರ್ಷಗಳಿಂದ ಇರುವುದೇ ಅಲ್ಲೇನೊ ಎನ್ನುವಷ್ಟು ಪ್ರಾಕೃತಿಕವಾಗಿ ತಲೆಯೆತ್ತಿ ನಿಂತಿದೆ. ಮಾನವನಲ್ಲಿನ ಅದಮ್ಯ ಚೈತನ್ಯಕ್ಕೆ ಯಾವುದೂ ಸಹ ಅಸಾಧ್ಯವಲ್ಲ ಎಂಬ ಮಾತಿಗೆ ಈ ಯೋಜನೆಯೆ ಸೂಕ್ತ ಉದಾಹರಣೆ.
ಸಂಗ್ರಹ ಮಾಹಿತಿ ಮತ್ತು ಲೇಖನ:-
-ಇಂದೂದರ್ ಒಡೆಯರ್, ಚಿತ್ರದುರ್ಗ (ಡುಗ್ಗು)








