ಮೈಸೂರು: ಮೈಸೂರಿನಲ್ಲಿ ಆರೋಗ್ಯಾಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣದ ಸಂಬಂಧ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ರಾಜ್ಯದ ಕೊರೋನಾ ವಾರಿಯರ್ಸ್ ಗಳಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಕಳೆದ ವರ್ಷದಿಂದ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರು ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆಗೆ ಶರಣಾದರೆ ಎಂದು ಹೇಳಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವರು ” ಯಾರೂ ಕೂಡಾ ನಾಗೇಂದ್ರ ಅವರ ಸಾವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು ಎಂದು ಕಳಕಳಿಯ ಮನವಿ ಮಾಡುತ್ತಿದ್ದೇನೆ. ಈಗಾಗಲೇ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಕೋವಿಡ್ ಯೋಧರ ನೆರವಿಗೆ ನಮ್ಮ ಸರ್ಕಾರ ಜೊತೆಗಿದೆ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತಷ್ಟು ಸೂಕ್ತ ಕ್ರಮಗಳು ಕೈಗೊಳ್ಳಲಾಗುವುದು” ಎಂದಿದ್ದಾರೆ.

ಇನ್ನೂ ” ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಪ್ರಾಣವನ್ನು ಹಿಂದಿರುಗಿ ತರಲು ಸಾಧ್ಯವಿಲ್ಲವೆಂದು ಗೊತ್ತಿದೆ. ಆದರೆ ಅವರ ಕುಟುಂಬದ ಸದಸ್ಯರಿಗೆ ಶಾಶ್ವತವಾದ ಪರಿಹಾರವನ್ನು ಸರ್ಕಾರ ಖಂಡಿತವಾಗಿಯೂ ಮಾಡುತ್ತದೆ. ಎಲ್ಲಾ ಕೋವಿಡ್ ಯೋಧರ ಜೊತೆ ಸರ್ಕಾರ ಇದೆ ಎಂದು ಹೇಳಲು ಇಚ್ಛಿಸುತ್ತೇನೆ.”

” ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿಮಾಡುವುದು ಅಮಾನವೀಯವಾಗುತ್ತದೆ. ವೈದ್ಯಕೀಯ ಸಂಘದ ಎಲ್ಲಾ ಆತ್ಮೀಯರಿಗೆ ಮನವಿ ಮಾಡುವುದೇನೆಂದರೆ ನಾಗೇಂದ್ರ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಆದ್ಯತೆ ಕೊಡಿ. ಅವರ ಕುಟುಂಬ ವರ್ಗದವರಿಗೆ ಮುಖ್ಯ ಮಂತ್ರಿ ಬಿಎಸ್‌ವೈ ಜೊತೆ ಚರ್ಚೆಸಿ ನ್ಯಾಯ ಕೊಡಿಸುತ್ತೇವೆ” ಎಂದಿದ್ದಾರೆ.

ಅಲ್ಲದೇ ” ರಾಜ್ಯದ ಎಲ್ಲಾ ಭಾಗದ ವೈದ್ಯರುಗಳಿಗೆ, ಕೊರೊನಾ ಯೋಧರಿಗೆ ನೈತಿಕ ಸ್ಫೂರ್ತಿಯನ್ನು ಮುಂದಿನ ದಿನಗಳಲ್ಲಿ ನಿಮ್ಮ ಒತ್ತಡಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಿಡುವಿಲ್ಲದೇ ಕೆಲಸ ಮಾಡುತ್ತಿರುವ ನಿಮಗೆ ರಜೆ, ಒತ್ತಡ ಸಡಿಲ ಮಾಡಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.” ಎಂದು ತಿಳಿಸಿದ್ದಾರೆ.

ಇನ್ನೂ ” ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ್ ರವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮುಂದಿನ ಸೂಕ್ತ ಕ್ರಮಗಳ ಬಗ್ಗೆ ಚರ್ಚೆಮಾಡುತ್ತಿದ್ದೀವಿ”.
“ನಾಗೇಂದ್ರ ಸಾವಿನ ನೋವು ಒಬ್ಬ ವೈದ್ಯನಾಗಿ ನನಗೂ ಅರ್ಥವಾಗುತ್ತದೆ. ಶಾಂತಿ ಕಾಪಾಡಿ. ಕೋವಿಡ್ ಸಂಕಷ್ಟ ಕಾಲದಲ್ಲಿ ಸಂಯಮದಿಂದ ವರ್ತಿಸಿ. ನಾಗೇಂದ್ರ ಜನಪರ ಅಧಿಕಾರಿ,ಸಹೃದಯಿ, ಅತ್ಯಂತ ಸೂಕ್ಷ್ಮ ಸ್ವಭಾವದವರು ಎಂದು ತಿಳಿಯಿತು. ಅವರ ಸಾವಿನ ತನಿಖೆಗೆ ಆದೇಶಿಸಿದ್ದೇನೆ. ಅವರ ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ”.

“ಕೋವಿಡ್ ನಿಯಂತ್ರಿಸುವಲ್ಲಿ ಬಿಡುವಿಲ್ಲದೇ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಎಲ್ಲಾ ಕೋವಿಡ್ ವಾರಿಯರ್ಸ್‌ಗಳಿಗೆ ನಾನು ಈ ಮೂಲಕ ತಿಳಿಸುವುದೇನಂದರೆ ಅಧಿಕ ಕೆಲಸದಿಂದ ನೀವು ಒತ್ತಡ, ಮಾನಸೀಕ ಖಿನ್ನತೆಗೆ ಒಳಗಾಗುತ್ತಿರುವು ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರದ ಪರವಾಗಿ ಭರವಸೆ ಕೊಡುತ್ತಿದ್ದೇನೆ.” ಎಂದು ಮನವಿ ಮಾಡಿಕೊಳ್ಳುವ ಜೊತೆಗೆ ಭರವಸೆ ನಿಡಿದ್ದಾರೆ ಸಚಿವ ಡಾ ಕೆ. ಸುಧಾಕರ್ ಅವರು.








