2021ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ಸರಣಿ.. ಏಪ್ರಿಲ್ ನಲ್ಲಿ ಐಪಿಎಲ್ ಟೂರ್ನಿ – ಬಿಸಿಸಿಐ ಬಾಸ್ ಗಂಗೂಲಿ ಸ್ಪಷ್ಟನೆ
2021ರ ಏಪ್ರಿಲ್ ನಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ತವರಿನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಪೂರ್ಣ ಪ್ರಮಾಣದ ಸರಣಿಯನ್ನು ಆಡಲಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಬಿಸಿಸಿಐ 2021ರ ಟಿ-ಟ್ವೆಂಟಿ ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಹಾಗೇ ಆಸ್ಟ್ರೇಲಿಯಾaಪ್ರವಾಸ, ಇಂಗ್ಲೆಂಡ್ ಸರಣಿ ಮತ್ತು 2021ರ ಐಪಿಎಲ್ ಟೂರ್ನಿಯ ಬಗ್ಗೆ ಗಂಗೂಲಿ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ಇ ಮೇಲ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸರಣಿ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ ಎಂದು ಹೇಳಿರುವ ಗಂಗೂಲಿ ದೇಸಿ ಕ್ರಿಕೆಟ್ ಟೂರ್ನಿ ಯಾವಾಗ ಶುರು ಆಗುತ್ತದೆ ಎಂಬುದರ ಬಗ್ಗೆ ನಿಗದಿತ ದಿನಾಂಕವನ್ನು ತಿಳಿಸಿಲ್ಲ. ಸಾಮಾನ್ಯವಾಗಿ ದೇಸಿ ಕ್ರಿಕೆಟ್ ಟೂರ್ನಿ ಆಗಸ್ಟ್ ನಿಂದ ಶುರುವಾಗಬೇಕಿತ್ತು. ಆದ್ರೆ ಕೋವಿಡ್ -19 ಸೋಂಕಿನಿಂದಾಗಿ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಈ ನಡುವೆ, ಬಿಸಿಸಿಐ 2020ರ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಟೂರ್ನಿ ನಡೆಯಲಿದೆ. ಎಲ್ಲಾ ತಂಡಗಳು ದುಬೈಗೆ ತಲುಪಿದ್ದು ಕೋವಿಡ್ ಮಾರ್ಗಸೂಚಿಗಳ ಪ್ರಕಾರವೇ ಅಭ್ಯಾಸವನ್ನು ನಡೆಸುತ್ತಿವೆ.