2020 ರ ಅಂತ್ಯದ ವೇಳೆಗೆ ಭಾರತಕ್ಕೆ ಕೊರೋನವೈರಸ್ ಲಸಿಕೆ – ಡಾ.ಹರ್ಷ್ ವರ್ಧನ್
ಗಾಜಿಯಾಬಾದ್, ಅಗಸ್ಟ್ 23: 2020 ರ ಅಂತ್ಯದ ವೇಳೆಗೆ ಭಾರತಕ್ಕೆ ಕೊರೋನವೈರಸ್ ಲಸಿಕೆ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ
ಈ ವರ್ಷದ 2020 ರ ಅಂತ್ಯದ ವೇಳೆಗೆ ಭಾರತವು ತನ್ನ ಮೊದಲ ಕೊರೋನವೈರಸ್ ಲಸಿಕೆ ಪಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಶನಿವಾರ ಹೇಳಿದ್ದಾರೆ. ಮುಂದಿನ 4-5 ತಿಂಗಳಲ್ಲಿ ಕೋವಿಡ್ -19 ಲಸಿಕೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಮೂರು ಕೋವಿಡ್ -19 ಲಸಿಕೆಗಳಲ್ಲಿ ಒಂದು ಕ್ಲಿನಿಕಲ್ ಮಾನವ ಪ್ರಯೋಗದ ಮೂರನೇ ಹಂತಕ್ಕೆ ಪ್ರವೇಶಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದರು.
ಗಾಜಿಯಾಬಾದ್ ಎನ್ಡಿಆರ್ಎಫ್ 10 ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕೋವಿಡ್ -19 ಲಸಿಕೆಗಳಲ್ಲಿ ಒಂದು ಕ್ಲಿನಿಕಲ್ ಪ್ರಯೋಗದ ಮೂರನೇ ಹಂತದಲ್ಲಿದೆ. ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಅಭಿವೃದ್ಧಿಪಡಿಸಲಾಗುವುದು ಎಂದು ನಮಗೆ ತುಂಬಾ ವಿಶ್ವಾಸವಿದೆ ಎಂದು ಡಾ.ಹರ್ಷ್ ವರ್ಧನ್ ಹೇಳಿದರು .
ಕೋವಿಡ್-19 ವಿರುದ್ಧ ಎಂಟು ತಿಂಗಳಲ್ಲಿ, ಭಾರತವು ಶೇಕಡಾ 75 ರಷ್ಟು ಉತ್ತಮ ಚೇತರಿಕೆ ಪ್ರಮಾಣವನ್ನು ಹೊಂದಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಒಟ್ಟು 2.2 ಮಿಲಿಯನ್ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಮನೆಗೆ ಹೋಗಿದ್ದಾರೆ ಮತ್ತು ಇನ್ನೂ ಏಳು ಲಕ್ಷ ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎಂದು ಹೇಳಿದರು.
ಪುಣೆಯಲ್ಲಿ ಕೇವಲ ಒಂದು ಪರೀಕ್ಷಾ ಪ್ರಯೋಗಾಲಯದಿಂದ ಪ್ರಾರಂಭಿಸಿದ ನಾವು ನಮ್ಮ ರೋಗನಿರ್ಣಯದ ಸಾಮರ್ಥ್ಯಗಳನ್ನು ಹೆಚ್ಚಿಸಿದ್ದೇವೆ ಮತ್ತು ನಮ್ಮ ಪರೀಕ್ಷಾ ಸಾಮರ್ಥ್ಯವನ್ನು ಬಲಪಡಿಸಿದ್ದೇವೆ. ಇಂದು ಭಾರತವು ಕೋವಿಡ್-19 ಗಾಗಿ 1500 ಪರೀಕ್ಷಾ ಪ್ರಯೋಗಾಲಯಗಳನ್ನು ಹೊಂದಿದೆ ಮತ್ತು ಶುಕ್ರವಾರ ನಾವು ಒಂದು ದಶಲಕ್ಷಕ್ಕೂ ಹೆಚ್ಚು ಕೊರೋನಾ ಮಾದರಿಗಳನ್ನು ಪರೀಕ್ಷಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲವೂ ಸರಿಯಾಗಿ ನಡೆದರೆ, 2020 ರ ಅಂತ್ಯದ ವೇಳೆಗೆ ಭಾರತಕ್ಕೆ ಕೊರೋನವೈರಸ್ ಲಸಿಕೆ ಲಭ್ಯವಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವರು ನಂತರ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ರ ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ ಪಾಲ್, ಮೂರನೇ ಹಂತಕ್ಕೆ ಪ್ರವೇಶಿಸುವ ಲಸಿಕೆಯು ಅದರ ಪ್ರಯೋಗದ ಆರಂಭಿಕ ಹಂತಗಳಲ್ಲಿ ಉತ್ತೇಜಕ ಫಲಿತಾಂಶಗಳನ್ನು ನೀಡಿದೆ. ಇತರ ಎರಡು ಲಸಿಕೆಗಳು ಪ್ರಸ್ತುತ ತಮ್ಮ ಪೂರ್ವ-ಕ್ಲಿನಿಕಲ್ ಪ್ರಯೋಗಗಳ ಹಂತ -1 ಅಥವಾ II ರಲ್ಲಿವೆ ಎಂದು ಹೇಳಿದ್ದಾರೆ. ಆದಾಗ್ಯೂ, ಅವರು ಲಸಿಕೆಗಳ ಹೆಸರನ್ನು ಬಹಿರಂಗಪಡಿಸಲಿಲ್ಲ