ಬೆಳಗಾವಿ : ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಕುರಿತ ವಿವಾದವನ್ನು ಗಣೇಶ ನಿಮಜ್ಜನೆಯ ಬಳಿಕ ಇತ್ಯರ್ಥಗೊಳಿಸುವುದಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸಂಬಂಧ ಗೋಕಾಕಿನಲ್ಲಿರುವ ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ನೇತೃತ್ವದ ಹಾಲುಮತ ಸಮಾಜದ ಮುಖಂಡರು ಭೇಟಿ ನೀಡಿದ್ದರು. ಈ ವೇಳೆ ಮುಖಂಡರು ವಿವಾದ ಬಗೆಹರಿಸುವಂತೆ ರಮೇಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಂಡಿದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವ ಜಾರಕಿಹೊಳಿ, ಬೆಳಗಾವಿಯ ಪೀರನವಾಡಿಯಲ್ಲಿನ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಕುರಿತು ಇರುವ ವಿವಾದವನ್ನು ಗಣೇಶ ನಿಮಜ್ಜನೆಯ ಬಳಿಕ ಇತ್ಯರ್ಥಗೊಳಿಸುವುದಾಗಿ ತಿಳಿಸಿದರು. ಪೀರನವಾಡಿಯಲ್ಲಿನ ಎರಡು ಸಮುದಾಯಗಳ ಪ್ರಮುಖ ಮುಖಂಡರ ಸಭೆ ನಡೆಸಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ತಾಳ್ಮೆಯಿಂದಿರುವಂತೆ ರಾಯಣ್ಣ ಅಭಿಮಾನಿಗಳಲ್ಲಿ ಸಚಿವರು ಮನವಿ ಮಾಡಿದ್ದಾರೆ.