ಬೆಂಗಳೂರು : ಭವಿಷ್ಯದ ದೃಷ್ಠಿಯಿಂದ ಕಾಂಗ್ರೆಸ್ ನಲ್ಲಿ ಈಗ ನಾಯಕತ್ವ ಬದಲಾವಣೆ ಕೂಗಿ ತುಸು ಜೋರಾಗಿ ಕೇಳಿ ಬರುತ್ತಿದೆ. ಅಸ್ತಿತ್ವ ಉಳಿವಿಗಾಗಿ ಈಗ ನಾಯಕತ್ವ ಬದಲಾಗಲೇಬೇಕೆಂದು ಪಕ್ಷದ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಇದೇ ವಿಚಾರವಾಗಿ ಇಂದು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರಿದ ರಾಜ್ಯ ಕಾಂಗ್ರೆಸ್ ನಾಯಕರು
ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕೆ ಅಥವಾ ಗಾಂಧಿಯೇತರ ನಾಯಕರು ಅಗ್ರ ಸ್ಥಾನ ಅಲಂಕರಿಸಬೇಕೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದ್ದು, ಇತ್ತ ಕರ್ನಾಟಕದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ನಾಯಕತ್ವದತ್ತ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮ್ಯಯ ಅವರು, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ನೀವೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಿರಿ. ಒಂದೊಮ್ಮೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾದರೆ ಕೂಡಲೇ ರಾಹುಲ್ ಗಾಂಧಿ ಅವರಿಗೆ ಅಧಿಕಾರ ವಹಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, ಕಳೆದ ಇಂದು ಶತಮಾನದಿಂದ ನೆಹರೂ-ಗಾಂಧಿ ಕುಟುಂಬ ಮಾಡಿದ ತ್ಯಾಗ ಹಾಗೂ ಕೊಡುಗೆಗಳನ್ನು ಪಕ್ಷವು ಮರೆಯಬಾರದು. ಅವರು ಭಾರತದ ಕಲ್ಪನೆಗಾಗಿ ಬಂಡೆಯಂತೆನಿಂತಿದ್ದಾರೆ. ನಾವು ಸಮಾನ ಸಮಾನ ಸಮಾಜ ಮತ್ತು ಬಲವಾದ ಪ್ರಜಾಪ್ರಭುತ್ವ ನಿರ್ಮಿಸಿದ್ದೇವೆ ಎಂದು ಖಚಿತಪಡಿಸಿದ್ದೇವೆ. 2004ರಲ್ಲಿ ಮತ್ತು 2009ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸೋನಿಯಾ ಮಾಡಿರುವ ಶ್ರಮ ಮರೆಯಬಾರದು. ಸದ್ಯದ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು, ಸೋನಿಯಾ ಗಾಂಧಿ ಅವರು ನಿಂತು ಪಕ್ಷವನ್ನು ಬಲಪಡಿಸಬೇಕು. ಅವರಿಗೆ ಅಧ್ಯಕ್ಷರಾಗಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ರಾಹುಲ್ ಗಾಂಧಿ ಅವರಿಗೆ ತಕ್ಷಣವೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು. ಆ ಮೂಲಕ ಎಲ್ಲಾ ಅನಿಶ್ಚಿತತೆಗಳಿಗೆ ವಿರಾಮ ಇಡಬೇಕು ಎಂದು ಮನವಿ ಮಾಡಿದ್ದಾರೆ.








