ನವದೆಹಲಿ : ಪಕ್ಷದ ನಾಯಕತ್ವ ಸಂಪೂರ್ಣ ಬದಲಾವಣೆ, ಅಧಿಕಾರ ವಿಕೇಂದ್ರೀಕರಣ ಕೋರಿ ಸೋನಿಯಾ ಗಾಂಧಿಗೆ 23 ಹಿರಿಯ ಮುಖಂಡರು ಬರೆದ ಪತ್ರ ಪಕ್ಷದಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸಿದೆ.
ಹಾಲಿ ಸಂಸದರು, ಕೇಂದ್ರದ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಎಐಸಿಸಿ ಪದಾಕಾರಿಗಳು ಮತ್ತು ಸಿಡಬ್ಲ್ಯುಸಿ ಸದಸ್ಯರೂ ಸೇರಿದಂತೆ ಕಾಂಗ್ರೆಸ್ ನ 23 ಹಿರಿಯ ಮುಖಂಡರು ಪಕ್ಷದ ಸಂಘಟನೆ ಮತ್ತು ಶಕ್ತಿ ಗಣನೀಯವಾಗಿ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಅವರಿಗೆ ಬರೆದ ಪತ್ರ ಪಕ್ಷದಲ್ಲಿ ಭಿನ್ನಮತದ ಬಿರುಗಾಳಿಯನ್ನೇ ಎಬ್ಬಿಸಿದೆ
ಪಕ್ಷದ ನಾಯಕತ್ವ ಸಂಪೂರ್ಣ ಬದಲಾವಣೆ, ಅಧಿಕಾರ ವಿಕೇಂದ್ರೀಕರಣ, ರಾಜ್ಯ ಘಟಕಗಳ ಸಬಲೀಕರಣ, ಎಲ್ಲ ಹಂತಗಳಲ್ಲೂ ಕಾಂಗ್ರೆಸ್ ಸಂಘಟನೆಗೆ ಚುನಾವಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈ ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದ್ದು, ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜತೀನ್ ಪ್ರಸಾದ್, ಭೂಪಿಂದರ್ ಸಿಂಗ್ ಹೂಡಾ, ರಾಜೀಂದರ್ ಕೌರ್ ಭಟ್ಟಲ್, ಡಾ.ಎಂ.ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚವಾಣ್, ಪಿ.ಜಿ. ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮಿಲಿಂದ್ ದೌದರಿ, ರಾಜ್ ಬಬ್ಬರ್, ಅರವಿಂದ್ ಸಿಂಗ್, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರತಾಪ್ ಸಿಂಗ್ ಕುಲದೀಪ್ ಶರ್ಮಾ, ಯೋಗಾನಂದ ಶಾಸ್ತ್ರಿ ಹಾಗೂ ಸಂದೀಪ್ ದೀಕ್ಷಿತ್ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಇಂದು ನಡೆಯುತ್ತಿರುವ ಸಿಡಬ್ಲ್ಯುಸಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಮತ್ತು ಪಕ್ಷದ ಪುನರ್ ಸಂಘಟನೆ ಕುರಿತು ಯಾವ ನಿರ್ಧಾರ ಕೈಗೊಳ್ಳಬಹುದೆಂಬ ಬಗ್ಗೆ ಭಾರೀ ಆಸಕ್ತಿ ಕೆರಳಿಸಿದೆ.
ಸದ್ಯ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದ್ರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೇರಿದಂತೆ ಹಲವು ಹಿರಿಯ ನಾಯಕರು ನೀವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಮನವಿ ಮಾಡಿದ್ದಾರೆ.









