ನವದೆಹಲಿ: ನಾನು ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ ಮಾಜಿ ಸಿಜೆಐ ರಂಜನ್ ಗೊಗೊಯಿ ಅವರು ಎಲ್ಲಾ ಊಹಾಪೋಗಳಿಗೆ ತೆರ ಎಳೆದಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನ ಹಿರಿಯ ನಾಯಕರು ಹಾಗೂ ಅಸ್ಸಾಂನ ಮಾಜಿ ಸಿಎಂ ಆದ ತರುಣ್ ಗೊಗೊಯಿ ಅವರು ರಂಜನ್ ಗೊಗೊಯಿ ಅವರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿ ಎಂದು ಟ್ವೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ರು. ಇನ್ನೂ ಅವರ ಈ ಟ್ವೀಟ್ ಭಾರೀ ಚರ್ಚೆಗೂ ಕಾರಣವಾಗಿತ್ತು. ಆದರೆ ಈ ಬಗ್ಗೆ ರಂಜನ್ ಗೊಗೊಯಿ ಅವರೇ ಸ್ಪಷ್ಟನೆ ನೀಡಿದ್ದು, ನಾನು ರಾಜಕಾರಣಿ ಅಲ್ಲ ಮತ್ತು ಸಕ್ರಿಯ ರಾಜಕೀಯಕ್ಕೆ ಸೇರುವ ಉದ್ದೇಶವೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಾನು ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯೂ ಅಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಕೆಲವರು ನಾನು ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸುತ್ತಿದ್ದಾರೆ. ಇದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ. ಅಲ್ಲದೇ ರಾಜ್ಯಸಭೆಗೆ ವಿವಿಧ ಕ್ಷೇತ್ರಗಳಿಂದ ನೇಮಕವಾಗುವ ಮಂದಿಗೂ ಮತ್ತು ರಾಜಕೀಯ ಪಕ್ಷದಿಂದ ಚುನಾಯಿತರಾಗುವ ಜನಪ್ರತಿನಿಗಳಿಗೂ ವ್ಯತ್ಯಾಸವಿದೆ. ಆದರೆ ಕೆಲವರಿಗೆ ಈ ವ್ಯತ್ಯಾಸದ ಬಗ್ಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ತರುಣ್ ಗೊಗೊಯಿ ಅವರಿಗೆ ತಿರುಗೇಟು ನೀಡಿದ್ದಾರೆ.








