ಬೆಳಗಾವಿ: ಕಳೆದ 15 ದಿನಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಬೆಳಗಾವಿಯ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಹತ್ತಿದ ಯಡಿಯೂರಪ್ಪ, ಜಿಲ್ಲೆಯ ಅಥಣಿ, ರಾಮದುರ್ಗ, ಗೋಕಾಕ್ ಹಾಗೂ ಬೆಳಗಾವಿ ತಾಲೂಕಿನ ವಿವಿಧೆಡೆ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಖುದ್ದು ಪರಿಶೀಲನೆ ನಡೆಸಿದರು.
ಕಳೆದ 15 ದಿನಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ನೆರೆಯ ಮಹಾರಾಷ್ಟçದ ಕೊಯ್ನಾ ಜಲಾಶಯದಿಂದ ಬಂದ ಅಪಾರ ಪ್ರಮಾಣದ ನೀರಿನಿಂದ ಬೆಳಗಾವಿ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರವಾಹದಿಂದ ಬೆಳಗಾವಿಯ ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರ ಬೆಳೆ ನಷ್ಟವಾಗಿದ್ದು, ನೂರಾರು ಮನೆಗಳು ಕುಸಿದು ಹೋಗಿವೆ. ಜತೆಗೆ ಪ್ರವಾಹಕ್ಕೆ ಸಿಲುಕಿ ಹಲವು ಸೇತುವೆಗಳು ಮುಳುಗಡೆಯಾಗಿದ್ದರೆ, ಹತ್ತಾರು ಸೇತುವೆಗಳು ಕೊಚ್ಚಿ ಹೋಗಿವೆ.
ಈ ಹಿನ್ನೆಲೆಯಲ್ಲಿ 11.15ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ತೆರಳಿದ ಯಡಿಯೂರಪ್ಪ, ನೆರೆ ಹಾನಿಪೀಡಿತ ಪ್ರದೇಶಗಳ ವಾಸ್ತವ ಪರಿಸ್ಥಿತಿ ಪರಿಶೀಲಿಸಿದರು.
ಮುಖ್ಯಮಂತ್ರಿಗಳಿಗೆ ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ಸಾಥ್ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ವಿಜಯಪುರ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದರು.