ಬೆಂಗಳೂರು: ಮುಂದಿನ ವಾರ ಕ್ಲಬ್, ಪಬ್ ಹಾಗೂ ಬಾರ್‍ಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.
ಕ್ಲಬ್‍ಗಳಲ್ಲಿ ಕ್ರೀಡಾ ಚಟುವಟಿಕೆ ಮಂಗಳವಾರ(ಇಂದಿನಿಂದ)ದಿಂದ ಆರಂಭವಾಗಿದೆ. ಊಟದ ಜತೆಗೆ ಮದ್ಯ ಸರಬರಾಜು ಮಾಡುವ ಪದ್ಧತಿ ಇದೆ. ಎಲ್ಲಾ ಕಡೆ ಕುಳಿತುಕೊಳ್ಳಲು ಅನುಮತಿ ನೀಡಿರುವುದರಿಂದ ಕ್ಲಬ್‍ಗಳನ್ನು ಆರಂಭಿಸುವ ಬಗ್ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೇಳಿದ್ದೇನೆ. ಮುಂದಿನ ದಿದನಗಳಲ್ಲಿ ಅನುಮತಿ ಸಿಗುವ ವಿಶ್ವಾಸವಿದೆ ಎಂದರು.
3000 ಕೋಟಿ ಆದಾಯ ಖೋತಾ
ಲಾಕ್‍ಡೌನ್ ಹಾಗೂ ಕೊರೊನಾದಿಂದಾಗಿ ಅಬಕಾರಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಅರ್ಧದಷ್ಟು ಖೋತಾ ಆಗಿದೆ. ಅಬಕಾರಿ ಇಲಾಖೆಯೊಂದರಲ್ಲೇ 3000 ಕೋಟಿ ಆದಾಯ ನಷ್ಟವಾಗಿದೆ. ಈ ನಷ್ಟ ಸದ್ಯ 2000 ಕೋಟಿಗೆ ಬಂದಿದೆ. ಮುಂದಿನ 8 ತಿಂಗಳ ವೇಳೆಗೆ ನಷ್ಟ ಸರಿದೂಗುವ ವಿಶ್ವಾಸವಿದೆ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಆನ್‍ಲೈನ್‍ನಲ್ಲಿ ಪ್ರಾಯೋಗಿಕವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಯೋಜನೆ ಎಷ್ಟು ಯಶಸ್ವಿಯಾಗಿದೆ ಎಂಬುದರ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ಎಲ್ಲಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಆದರೆ, ತರಾತುರಿಯಲ್ಲಿ ಯಾವುದೇ ಯೋಜನೆಗಳನ್ನು ಜಾರಿ ಮಾಡುವುದಿಲ್ಲ ಎಂದು ಸಚಿವ ಹೆಚ್.ನಾಗೇಶ್ ವಿವರ ನೀಡಿದ್ದಾರೆ.








