2019-20ರ ಹಣಕಾಸು ವರ್ಷದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ – ಆರ್’ಬಿಐ ವಾರ್ಷಿಕ ವರದಿ
ಹೊಸದಿಲ್ಲಿ, ಅಗಸ್ಟ್26: 2019-20ರ ಹಣಕಾಸು ವರ್ಷದಲ್ಲಿ 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಮತ್ತು ಈ ನೋಟುಗಳ ಚಲಾವಣೆ ಪ್ರಸ್ತುತ ವರ್ಷದಲ್ಲಿ ಕಡಿಮೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ವಾರ್ಷಿಕ ವರದಿ ತಿಳಿಸಿದೆ.

2018ರ ಮಾರ್ಚ್ ಕೊನೆಯಲ್ಲಿ ಚಲಾವಣೆಯಲ್ಲಿರುವ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಖ್ಯೆ 33,632 ಲಕ್ಷವಾಗಿದ್ದು, 2019ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷವಾಗಿತ್ತು ಎಂದು ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿ ತಿಳಿಸಿದ್ದು, 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
2020ರ ಮಾರ್ಚ್ ಅಂತ್ಯದ ವೇಳೆಗೆ ಶೇ. 2.4 ರಷ್ಟಿದ್ದ 2,000 ರೂ ಮುಖಬೆಲೆಯ ಒಟ್ಟು ನೋಟುಗಳ ಪ್ರಮಾಣವು ಕಳೆದ ವರ್ಷ 2019ರ ಮಾರ್ಚ್ ಅಂತ್ಯದ ವೇಳೆ ಶೇ.3 ಹಾಗೂ 2018ರ ಮಾರ್ಚ್ ಅಂತ್ಯಕ್ಕೆ 3.3 ರಷ್ಟಿತ್ತು ಎಂದು ಮಾಹಿತಿ ನೀಡಿದೆ.
2019-20ರ ಸಮಯದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಯಾವುದೇ ರೀತಿಯಾದ ಬೇಡಿಕೆ ಬಂದಿಲ್ಲ. ಅಷ್ಟೇ ಅಲ್ಲ ಬಿಆರ್ಬಿಎನ್ಎಂಪಿಎಲ್ ಹಾಗೂ ಎಸ್ಪಿಎಂಸಿಐಎಲ್ನಿಂದ ಕೂಡಾ ನೂತನವಾಗಿ ಸರಬರಾಜು ಆಗಿಲ್ಲ. ಆದರೆ 500 ರೂ ಹಾಗೂ 200 ರೂ ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಏರಿಕೆ ಕಂಡಿದ್ದು, 2019-20ರ ಸಮಯದಲ್ಲಿ ಬಿಆರ್ಬಿಎನ್ಎಂಪಿಎಲ್ ಹಾಗೂ ಎಸ್ಪಿಎಂಸಿಐಎಲ್ಗೆ 100ರೂ, 50ರೂ, 200ರೂ, 10ರೂ ಹಾಗೂ 20 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಆದೇಶಿಸಿತ್ತು ಎಂದು ಹೇಳಿದೆ.

ಬ್ಯಾಂಕ್ ನೋಟುಗಳ ಮುದ್ರಣಕ್ಕೆ ಸಂಬಂಧಪಟ್ಟ ಬಗ್ಗೆ ಆರ್’ಬಿಐ ಜೊತೆಗೆ ಸಮಾಲೋಚಿಸಿ ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲವಾಗುವಂತೆ ನೆರವಾಗಲು ಸರ್ಕಾರ ನಿರ್ಧರಿಸಿದ್ದು, 2019-20ನೇ ಸಾಲಿನಲ್ಲಿ 2,000 ರೂ ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಯಾವುದೇ ಇಂಡೆಂಟ್ ಅನ್ನು ಮುದ್ರಣಾಲಯದಲ್ಲಿ ಇರಿಸಲಾಗಿಲ್ಲ ಎಂದು ಹೇಳಿದೆ. ಈ ನಡುವೆ 2020ರ ಮಾರ್ಚ್ 16ರಂದು 2,000ರೂ ಬ್ಯಾಂಕ್ ನೋಟುಗಳ ಮುದ್ರಣವನ್ನು ನಿಲ್ಲಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.







![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
