ಬೆಂಗಳೂರು : ಕೊರೊನಾ ಕಾಟ, ಡಿ.ಜೆ ಹಳ್ಳಿ ಗಲಭೆ, ನೆರೆ ಸಂಕಷ್ಟದ ಮಧ್ಯೆ ಮತ್ತೆ ಸಂಪುಟ ವಿಸ್ತರಣೆ ಸುದ್ದಿ ಸದ್ದು ಮಾಡುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ ಮಂತ್ರಿಗಿರಿ ಬಗ್ಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳುವುದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಿ ಎಂದು ನಾನು ಕೇಳುವುದಿಲ್ಲ. ಅವರೇ ತಿಳಿದು ಮಾಡಬೇಕು. ಈ ಸರ್ಕಾರ ಅಧಿಕಾರಕ್ಕೆ ಬರಲು ನಾನು ಕೂಡ ಒಬ್ಬ ಕಾರಣ. ನಾನು ಮಂತ್ರಿ ಆಗಿ ಏನೊ ಮಾಡಿ ಬಿಡುತ್ತೇನೆ ಎಂದಲ್ಲ. ನಾನು ರಾಜ್ಯದ ಹಿರಿಯ ರಾಜಕಾರಣಿ. 1978ರಲ್ಲಿ ರಾಜಕೀಯಕ್ಕೆ ಬಂದೆ. ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆಯವರು 1972ರಲ್ಲೇ ಬಂದವರು. ನಮ್ಮಂತವರ ಅನುಭವ ಪಡೆಯಿರಿ ಎಂದು ಹೇಳುತ್ತಿದ್ದೇನೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಹೋಗಿ ನನ್ನನ್ನು ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಯಡಿಯೂರಪ್ಪನವರು ನಾಲಿಗೆ ಮೇಲೆ ನಿಂತ ನಾಯಕ. ನುಡಿದಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.









