ಬೆಂಗಳೂರು: ತಾವು 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾಗಿ ಕಾಂಗ್ರೆಸ್ ಮಾಡಿದ ಆರೋಪ ಒಂದು ಹಾಸ್ಯಾಸ್ಪದವಾದ ಜೊಳ್ಳು ಆರೋಪ ಎಂದು ಸಿಎಂ ಬಿಎಸ್‍ವೈ ಪುತ್ರ ಬಿ.ವೈ ವಿಜಯೇಂದ್ರ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಕಟ್ಟು ಕಥೆ ಕಟ್ಟುವುದರಲ್ಲಿ, ಹಸೀ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ. ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಜೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶಪೂರಿತ, ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು ಎಂದು ಟ್ವಿಟರ್ ನಲ್ಲಿ ವಿಜಯೇಂದ್ರ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಬಿ.ವೈ ವಿಜಯೇಂದ್ರ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಬಿಜೆಪಿ ಶಾಸಕರೇ ಹೈಕಮಾಂಡ್ ಪತ್ರ ಬರೆದು ದೂರು ನೀಡಿದ್ದಾರೆ ಎಂದು ಆರೋಪಿಸಿ ಪತ್ರವನ್ನು ಬಿಡುಗಡೆ ಮಾಡಿದ್ದರು.
ಬಿ.ವೈ ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಹಾಗೂ ವಿಡಿಯೋ ಕ್ಲಿಪ್ಪಿಂಗ್ ಣಾವು ಸಂಗ್ರಹಿಸಿದ್ದೇವೆ. ಈ ಆರೋಪಗಳ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು. ಸರ್ಕಾರಕ್ಕೆ 20 ದಿನ ಗಡುವು ನೀಡುತ್ತೇವೆ. ಯಾವುದೇ ಕ್ರಮಮೈಗೊಳ್ಳದಿದ್ದರೆ ಆಡಿಯೋ, ವಿಡಿಯೋ ಬಹಿರಂಗ ಮಾಡುವುದಾಗಿ ಲಕ್ಷ್ಮಣ್ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.