ನವದೆಹಲಿ: ಮೂರು ರಾಜಧಾನಿಗಳ ರಚನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪು ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ಪೀಠವು, ಈ ವಿಷಯವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ವಿಲೇವಾರಿಗೊಳಿಸುವಂತೆ ಹೈಕೋರ್ಟ್ಗೆ ಸೂಚಿಸಿದೆ. ಸದ್ಯಕ್ಕೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.
![]()
ವಿಶಾಖಪಟ್ಟಣದಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಮತ್ತು ಕರ್ನೂಲ್ನಲ್ಲಿ ನ್ಯಾಯಾಂಗ ರಾಜಧಾನಿ ರಚನೆಗೆ ಸಂಬಂಧಿಸಿದಂತೆ ಜುಲೈ 31ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಕೆಲವು ಸರ್ಕಾರೇತರ ಸಂಸ್ಥೆಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು.









