ಬೆಂಗಳೂರು: ಹಿಂದಿ ಭಾಷಾ ವಿಚಾರಚಾಗಿ ವಿವಾದದ ಕೇಂದ್ರ ಬಿಂದುವಾಗಿದ್ದ ಬೆಂಗಳೂರಿನ ಬಸವೇಶ್ವರ ವೃತ್ತದ ಬಳಿ ಬಿಬಿಎಂಪಿ ವತಿಯಿಂದ ನವೀಕರಿಸಲಾಗಿರುವ ‘ಅಶ್ವಾರೂಢ ಬಸವೇಶ್ವರ’ ಪ್ರತಿಮೆಗೆ ಕೊನೆಗೂ ಮುಕ್ತಿ ಸಿಕ್ಕಿದೆ.
ಚಾಲುಕ್ಯ ವೃತ್ತದ ಬಳಿ ನವೀಕರಿಸಲಾದ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಬಿಬಿಎಂಪಿ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ.
ಆದರೆ, ಪ್ರತಿಮೆ ಸುತ್ತಲೂ ಹಾಗೂ ಕೆಳಭಾಗದ ಕಲ್ಲುಗಳ ಮೇಲೆ ಬಸವಣ್ಣನವರ ವಚನಗಳನ್ನು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕೆತ್ತಲಾಗಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿ ಪ್ರತಿಮೆಯಲ್ಲಿ ಬರೆದ ಭಾಗವನ್ನು ತೆಗೆದು ಹಾಕುವಂತೆ ಕನ್ನಡಪರ ಹೋರಾಟಗಾರರು ಆಗ್ರಹಿಸಿದ್ದರು.
ಈ ವಿವಾದದ ಹಿನ್ನೆಲೆಯಲ್ಲಿ ಪ್ರತಿಮೆ ಉದ್ಘಾಟನೆ ಮುಂದಕ್ಕೆ ಹೋಗುತ್ತಾ ಬಂದಿತ್ತು. ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಶ್ವಾರೂಢ ಬಸವಣ್ಣನ ಪ್ರತಿಮ ಉದ್ಘಾಟಿಸಿದರು. ಡಿಸಿಎಂ ಅಶ್ವತ್ಥ ನಾರಾಯಣ, ವಸತಿ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ ರವಿ ಹಾಗೂ ಬಿಬಿಎಂಪಿ ಮಹಾಪೌರರಾದ ಗೌತಮ್‍ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








