ಪುಲ್ವಾಮಾ ದಾಳಿ – ಜೈಷ್-ಎ- ಮೊಹಮದ್ ಭಯೋತ್ಪಾದಕರಿಗೆ ನೆರವು ನೀಡಿದ ಕಾಶ್ಮೀರ ಯುವತಿ
ಹೊಸದಿಲ್ಲಿ, ಅಗಸ್ಟ್27: ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ( ಎನ್ ಐಎ) 13500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಕಾಶ್ಮೀರದ ಯುವತಿ ಇನ್ಶಾ ಜಾನ್ (23), ಜೈಷ್-ಎ- ಮೊಹಮದ್ ಭಯೋತ್ಪಾದಕರಿಗೆ ನೆರವಾಗಿದ್ದಳು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಎನ್ಐಎ ಕೋರ್ಟ್ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ದಾಳಿಯ ಪ್ರಧಾನ ಸಂಚುಕೋರ ಮಹಮದ್ ಉಮರ್ ಫಾರೂಕ್ ಜೊತೆಗೆ ಇನ್ಶಾ ಜಾನ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿದ್ದಳು ಎಂದು ಹೇಳಲಾಗಿದೆ.
ಇವರಿಬ್ಬರ ನಡುವಿನ ಪೋನ್ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ಆಲಿಸಲಾಗಿದೆ ಎಂದು ಎನ್ಐಎ ತಿಳಿಸಿದ್ದು, ಭದ್ರತಾ ಪಡೆಗಳ ಚಲನವಲನಗಳ ಮಾಹಿತಿಗಳನ್ನು ಈಕೆ ತನ್ನ ಪ್ರಿಯಕರ ಉಮರ್ ಗೆ ನೀಡಿದ್ದಳು ಎಂದು ತಿಳಿಸಿದೆ. 2018 ರ ಎಪ್ರಿಲ್ ನಲ್ಲೇ ಉಮರ್ ಫಾರೂಖ್ ಕಾಶ್ಮೀರಕ್ಕೆ ಬಂದಿದ್ದ ಎಂದು ಹೇಳಲಾಗಿದ್ದು, ಇನ್ಶಾ ಜಾನ್ ತಂದೆ ತಾರಿಖ್ ಪಿರ್ ಗೆ ಉಮರ್ ಫಾರೂಖ್ ಮತ್ತು ಇನ್ಶಾ ಜಾನ್ ರ ಪ್ರೀತಿಸುತ್ತಿರುವ ವಿಚಾರ ತಿಳಿದಿತ್ತು. ಆತ ದಾಳಿಯ ಹಿಂದಿನ ಪ್ರಮುಖ ರೂವಾರಿಗಳಾದ ಉಮರ್ ಫಾರೂಖ್, ಸಮೀರ್ ದಾರ್ ಮತ್ತು ಆದಿಲ್ ಅಹಮದ್ ದಾರ್ ಸಹಾಯ ಮಾಡಿದ್ದ ಎಂದು ಎನ್ಐಎ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ದಾಳಿ ಹೊಣೆ ಹೊತ್ತು ಬಿಡುಗಡೆ ಮಾಡಿದ ವಿಡಿಯೋವನ್ನು ಜಾನ್ ಮನೆಯಲ್ಲಿ ರೆಕಾರ್ಡ್ ಮಾಡಲಾಗಿತ್ತು ಎಂದು ಎನ್ಐಎ ತಿಳಿಸಿದೆ.
ಎನ್ಐಎ ಜೈಷ್-ಎ-ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿ 19 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪದ ಮೇಲೆ ಇನ್ಶಾ ಜಾನ್ ಎಂಬಾಕೆಯನ್ನು ಬಂಧಿಸಲಾಗಿದೆ.