ಸಂಗೀತಕ್ಕೆ ಸ್ಪಂದಿಸುತ್ತಿರುವ ಎಸ್’ಪಿಬಿ – ಮಗನೊಡನೆ ಸನ್ನೆ ಮೂಲಕ ಸಂವಹನ ನಡೆಸಲು ಪ್ರಯತ್ನ
ಚೆನ್ನೈ, ಅಗಸ್ಟ್27: ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಬುಧವಾರ ಪ್ರಕಟಣೆ ತಿಳಿಸಿದೆ.
ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿರುವ ಕೋಟ್ಯಾಂತರ ಅಭಿಮಾನಿಗಳಿಗೆ ಸಮಾಧಾನಕರವಾದ ಸುದ್ದಿಯನ್ನು ನೀಡಿರುವ ಆಸ್ಪತ್ರೆಯು ಅವರ ಮಗ ಚರಣ್ ಭೇಟಿ ಮಾಡಿದ್ದ ಸಂದರ್ಭದಲ್ಲಿ ಗಾಯಕ ಎಸ್. ಪಿಬಿ ಸನ್ನೆ ಮೂಲಕ ಸಂವಹನ ನಡೆಸಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದೆ.

ಎಸ್ ಬಿಪಿ ಪ್ರಜ್ಞಾ ಸ್ಥಿತಿಯಲ್ಲಿದ್ದು ಆರೋಗ್ಯ ಸ್ಥಿರವಾಗಿದೆ. ಆದರೆ ಇನ್ನೂ ಮಾತನಾಡುವ ಸ್ಥಿತಿಗೆ ಬಂದಿಲ್ಲ. ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದು ನಿಜ. ಅವರು ಶೀಘ್ರವೇ ಗುಣಮುಖರಾಗುತ್ತಾರೆ ಎಂಬ ಆಶಾಭಾವನೆಯನ್ನು ನಾವು ಹೊಂದಿದ್ದೇವೆ ಎಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯ ನಿರ್ದೇಶಕ ಡಾ ಪ್ರಶಾಂತ್ ರಾಜಗೋಪಾಲನ್ ತಿಳಿಸಿದ್ದಾರೆ.
ಕೋವಿಡ್‌ನಿಂದಾಗಿ ಅವರ ಶ್ವಾಸಕೋಶಕ್ಕೆ ಸ್ವಲ್ಪ ಹಾನಿಯಾಗಿದ್ದರೂ, ಅವರ ಇತರ ಅಂಗಗಳು ಮೊದಲಿನಿಂದಲೂ ಪರಿಪೂರ್ಣವಾಗಿಯೇ ಉಳಿದಿವೆ. ಈ ಸಮಯದಲ್ಲಿ, ನಾವು ಶ್ವಾಸಕೋಶದ ಚೇತರಿಕೆಗೆ ಗಮನಹರಿಸುತ್ತಿದ್ದೇವೆ ಎಂದು ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.

ಎಸ್. ಪಿಬಿ ಅವರ ಪುತ್ರ ಎಸ್.ಪಿ ಚರಣ್ ಬುಧವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ತಂದೆಯವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ಸಂಗೀತ ಕೇಳುತ್ತಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನನ್ನ ಜೊತೆ ಸಂವಹನ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.








