ಬೆಂಗಳೂರು: ಹೆತ್ತು, ಹೊತ್ತು ಸಾಕಿದ ಮಗಳು ಪರ ಜಾತಿ ಯುವಕನೊಂದಿಗೆ ಮದುವೆಯಾದ ಕಾರಣ ಪೋಷಕರು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾರೋಕ್ಯಾತನಹಳ್ಳಿ ಗ್ರಾಮದ ನಿವಾಸಿಗಳಾದ ಶಿವಲಿಂಗಪ್ಪ (51) ಹಾಗೂ ಚಂದ್ರಕಲಾ (45) ದಂಪತಿ ತಮ್ಮ ಮನೆ ಸಂಪ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತ ದಂಪತಿ ಹಿರಿಯ ಮಗಳು ಟೀಚಿಂಗ್ ಪ್ರಾಕ್ಟೀಸ್ ಮಾಡಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೊರೊನಾ ಕಾರಣಕ್ಕೆ ಶಾಲೆಗಳು ಆರಂಭವಾಗದ ಕಾರಣ ಕೆಲಸವಿಲ್ಲದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳಂತೆ. ಈ ವೇಳೆ ಸಹೋದ್ಯೋಗಿ ಪರಜಾತಿಯ ಯುವಕನೊಂದಿಗೆ ಪ್ರೇಮಾಂಕುರವಾಗಿ ನಿನ್ನೆಯಷ್ಟೇ ಆತನೊಂದಿಗೆ ಬೇರೆಡೆ ಹೋಗಿ ಮದುವೆ ಮಾಡಿಕೊಂಡಿದ್ದಳಂತೆ.
ಮಗಳ ಅನ್ಯಜಾತಿ ವಿವಾಹದ ಬಗ್ಗೆ ಹೇಗೋ ಅರಿತ ಪೋಷಕರು ರಾತ್ರಿ ವೇಳೆ ತಮ್ಮ ಮನೆಯ ಸಂಪ್ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ತಮ್ಮ ಮತ್ತೊಬ್ಬ ಮಗಳಿಗೆ ರಾತ್ರಿ ಪ್ರೀತಿಯಿಂದ ಊಟ ಮಾಡಿಸಿ ಮಲಗಿಸಿದ್ದರು. ಬೆಳಗ್ಗೆ ಮಗಳು ಎದ್ದು ಪೋಷಕರಿಗೋಸ್ಕರ ಹುಡುಕಾಡುವ ವೇಳೆ ಮನೆಯ ಸಂಪ್ ಮೇಲಿದ್ದ ಚೀಟಿಯನ್ನು ನೋಡಿದ್ದಾಳೆ. ಅದರಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದಿದ್ದನ್ನು ಗಮನಿಸಿ ಸಂಪ್ ಒಳಗೆ ನೋಡಿದಾಗ ಪೋಷಕರ ಶವ ತೇಲುತ್ತಿತ್ತು.
![]()
ವಿಷಯವನ್ನ ಅಕ್ಕಪಕ್ಕದ ಮನೆಯವರಿಗೆ ತಿಳಿಸಿ ಮಾದನಾಯಕನಹಳ್ಳಿ ಪೊಲೀಸರಿಗೆ ತಿಳಿಸಲಾಗಿದೆ. ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









