ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್ ಪ್ರತಿಪಕ್ಷದಲ್ಲಿರಲು ಬಯಸಿದರೆ ಚುನಾವಣೆಯ ಅಗತ್ಯವಿಲ್ಲ – ಗುಲಾಮ್ ನಬಿ ಆಜಾದ್
ಹೊಸದಿಲ್ಲಿ, ಅಗಸ್ಟ್29:ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಅವರು ಮುಂದಿನ 50 ವರ್ಷಗಳ ಕಾಲ ನನ್ನ ಪಕ್ಷ ಪ್ರತಿಪಕ್ಷದಲ್ಲಿರಲು ಬಯಸಿದರೆ, ಪಕ್ಷದೊಳಗಿನ ಪ್ರಮುಖ ಸಾಂಸ್ಥಿಕ ಹುದ್ದೆಗಳಿಗೆ ಚುನಾವಣೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ಇತರ ಪ್ರಮುಖ ಸಾಂಸ್ಥಿಕ ಹುದ್ದೆಗಳಿಗೆ ಚುನಾವಣೆ ನಡೆಸದಿದ್ದಲ್ಲಿ ಮುಂದಿನ 50 ವರ್ಷಗಳ ಕಾಲವೂ ಕಾಂಗ್ರೆಸ್ ಪ್ರತಿಪಕ್ಷಗಳಲ್ಲಿ ಕುಳಿತುಕೊಳ್ಳಲಿದೆ ಎಂದು ಭಿನ್ನಮತೀಯರ ಪತ್ರಕ್ಕೆ ಸಹಿ ಮಾಡಿದವರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ಪಕ್ಷವು ಚುನಾವಣೆಗಳನ್ನು ನಡೆಸಲಿಲ್ಲ ಎಂಬ ಅಂಶವನ್ನು ಎತ್ತಿರುವ ಗುಲಾಮ್ ನಬಿ ಆಜಾದ್ ಅವರು ಪಕ್ಷದ ವಿವಿಧ ಹುದ್ದೆಗಳಿಗೆ ಚುನಾವಣೆಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದಿದ್ದಾರೆ.
ಕಳೆದ ಹಲವು ದಶಕಗಳಿಂದ ನಾವು ಪಕ್ಷದಲ್ಲಿ ಚುನಾಯಿತ ಸಂಸ್ಥೆಗಳನ್ನು ಹೊಂದಿಲ್ಲ. ಬಹುಶಃ 10-15 ವರ್ಷಗಳ ಹಿಂದೆ ಅದು ನಡೆದಿರಬಹುದು. ಈಗ ನಾವು ಚುನಾವಣೆಯ ನಂತರ ಚುನಾವಣೆಯಲ್ಲಿ ಸೋತಿದ್ದೇವೆ, ಮತ್ತು ನಾವು ಪುನಃ ಅಧಿಕಾರಕ್ಕೆ ಬರಬೇಕಾದರೆ ಚುನಾವಣೆಗಳನ್ನು ನಡೆಸುವ ಮೂಲಕ ನಮ್ಮ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದ ಗುಲಾಮ್ ನಬಿ ಆಜಾದ್ ಮುಂದಿನ 50 ವರ್ಷಗಳ ಕಾಲ ನನ್ನ ಪಕ್ಷ ಪ್ರತಿಪಕ್ಷದಲ್ಲಿರಲು ಬಯಸಿದರೆ, ಪಕ್ಷದೊಳಗೆ ಚುನಾವಣೆಯ ಅಗತ್ಯವಿಲ್ಲ ಎಂದರು.
ಪಕ್ಷದೊಳಗಿನ ಚುನಾವಣೆಯನ್ನು ವಿರೋಧಿಸುವವರನ್ನು ಗುಲಾಮ್ ನಬಿ ಆಜಾದ್ ಟೀಕಿಸಿದ್ದು, ನಮ್ಮ ಚುನಾವಣಾ ಪ್ರಸ್ತಾಪವನ್ನು ವಿರೋಧಿಸುವ ಆ ಪದಾಧಿಕಾರಿಗಳು ಅಥವಾ ರಾಜ್ಯ ಘಟಕದ ಅಧ್ಯಕ್ಷರು ಅಥವಾ ಬ್ಲಾಕ್ ಜಿಲ್ಲಾ ಅಧ್ಯಕ್ಷರೂ ಚುನಾವಣೆ ನಡೆದರೆ ಎಲ್ಲಿ ಸ್ಥಾನ ಕಳೆದುಕೊಳ್ಳುತ್ತೇವೆ ಎಂದು ತಿಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾರು ಪ್ರಾಮಾಣಿಕವಾಗಿ ತಮ್ಮನ್ನು ಪಕ್ಷಕ್ಕೆ ತೊಡಗಿಸಿಕೊಂಡಿರುತ್ತಾರೆ ಅವರಿಗೆ ಸ್ವಾಗತವಿದೆ. ಪಕ್ಷದ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರು ಆಯ್ಕೆ ಮಾಡಬೇಕು ಎಂದರು .