ಮರೆಯಲಾಗದ ಮುಖ್ಯಮಂತ್ರಿ ಹೆಗಡೆ ಜನುಮದಿನದ ನೆನಪಿನಲ್ಲಿ:-
ಕರ್ನಾಟಕ ಕಂಡ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (29 ಆಗಸ್ಟ್ 1929) ನಯ ನಾಜೂಕುತನದ ಚಾಣಾಕ್ಷ ನಡೆಯ
ಲೆಕ್ಕಾಚಾರದ ರಾಜಕಾರಣಿ. ಆರು ಸಲ ವಿಧಾನಸಭೆ ಎರಡು ಸಲ ರಾಜ್ಯಸಭೆಗೆ ಆಯ್ಕೆಯಾಗಿ 1983 ರಿಂದ 1988ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು. ಹಾಗೆಯೇ ರಾಷ್ಟ್ರ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಅರಿತ ಕಟ್ಟಾಳು ಆಗಿದ್ದರೂ ಸಹ ಪ್ರಧಾನಿ ಹುದ್ದೆ ಕೈ ಗೂಡಲಿಲ್ಲ.
ದೇವರಾಜ ಅರಸರ ನಂತರ ಆಡಳಿತ ಮಾದರಿಯ ಹೊಸ ಮಜಲನ್ನು ಪರಿಚಯಿಸಿದ ಹೆಗಡೆ. 1983 ರಲ್ಲಿ ಅಪರಿಚಿತರಂತೆ ಕಂಡು ಬಂದವರು ಒಂದೇ ವರ್ಷದಲ್ಲಿ ಕರ್ನಾಟಕದ ಜನರಿಗೆ ಪರಿಚಯದ ಛಾಯಾಗ್ರಾಹಕರಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಯಲ್ಲಿ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಷ್ಟ್ರ ರಾಜಕಾರಣವನ್ನು ಒಮ್ಮೆ ಲುಗಾಡಿಸಿದ ವಾಮನ ಮೂರ್ತಿ!
ಹದಿಮೂರು ಬಾರಿ ಬಜೆಟ್ ಮಂಡಿಸಿದ ಅನುಭವಿ ಹೆಗಡೆಯವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ದೇವೇಗೌಡರು ಬಂಗಾರಪ್ಪ ಹಾಗೂ ಬೊಮ್ಮಾಯಿಯವರ ನಡುವೆ ಪೈಪೋಟಿ ಇದ್ದದ್ದನ್ನು ತುಂಡರಿಸಿದ ಚಂದ್ರಶೇಖರ್ ಮತ್ತು ಬಿಜು ಪಟ್ನಾಯಕ್ ಹೆಗಡೆಯವರನ್ನು ಆ ಸ್ಥಾನಕ್ಕೆ ಕೂರಿಸುವ ಜವಾಬ್ದಾರಿಯನ್ನು ದೇವೇಗೌಡರ ಭುಜಕ್ಕೆ ಕಟ್ಟಿದರು. ಅಷ್ಟೇ ಅಲ್ಲ ಕನಕಪುರದಿಂದ ಗೆಲ್ಲಿಸಿ ತಂದರು. ಮುಂದೆ ನಡೆದದ್ದು ಇತಿಹಾಸ. ಬರಗಾಲದ ಬೇಗೆಯಿಂದ ತತ್ತರಿಸುತ್ತಿದ್ದ ಕರ್ನಾಟಕಕ್ಕೆ ಏಕ ಕಾಲದಲ್ಲಿ ಐವತ್ತೈದು ಸಾವಿರ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಹೆಗಡೆ, ನಜೀರ್ ಸಾಬ್, ದೇವೇಗೌಡ, ರಾಚಯ್ಯ, ಎಂಪಿ ಪ್ರಕಾಶ್ ಮತ್ತು ವೈಜನಾಥ ಪಾಟೀಲರು ಗ್ರಾಮೀಣಾಭಿವೃದ್ದಿಯನ್ನು ಹಸನುಗೊಳಿಸಿದರು.
ಜನರ ಕೈಗೆ ನೇರ ಅಧಿಕಾರ ನೀಡುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನ ಬದ್ದಗೊಳಿಸಿ ವಿಧಾನಸೌಧದಲ್ಲಿ ಹೆಪ್ಪುಗಟ್ಟಿದ್ದ ಆಡಳಿತವನ್ನು
ಅಧಿಕಾರ ವಿಕೇಂದ್ರಿಕರಣದ ಮುಖಾಂತರ ದೇಶದಲ್ಲೇ ಪ್ರಥಮವಾಗಿ ಭದ್ರಗೊಳಿಸಿದ ಕೀರ್ತಿ ಅವರಿಗೆ ಸಂದಿತು. ಗುಂಡೂರಾಯರ ಕಾಲದ ಗೂಂಡಾಗಿರಿಯನ್ನು ಹತ್ತಿಕ್ಕಿದರು. ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ರೂಪಿಸಿ ಜನರ ಕುಂದು ಕೊರತೆ ವಿಭಾಗವನ್ನು ತೆರೆದರು.
ಆರ್ಥಿಕ ಶಿಸ್ತನ್ನು ಸರ್ಕಾರ ರೂಢಿಸಿಕೊಂಡಿತ್ತಾದರೂ ತಮ್ಮ ಸ್ನೇಹಿತ ಧಣಿಗಳಿಗೆ ಮೇಯಲು ಬಿಟ್ಟಿದ್ದರು.
ಅರಸರಿಗೂ ಹೆಗಡೆಯವರಿಗೂ ಅದೇ ಒಂದು ವ್ಯೆತ್ಯಾಸ, “ಎಂಬತ್ತು ಜನಕ್ಕೆ ಫಲ ಕೊಟ್ಟು ಅದರಿಂದ ಇಪ್ಪತ್ತು ಮಂದಿಗೆ ಕೆಡುಕಾಗುವುದಾದರೆ ಅರಸರು ಮುಲಾಜಿಲ್ಲದೆ ಮುಂದಡಿಯಿಡುತ್ತಿದ್ದರು.
ಅದೇ ಹೆಗಡೆಯವರು ತಮ್ಮ ನೆಚ್ಚಿನ ಹತ್ತುಜನರಿಗೆ ತೊಂದರೆಯಾಗುತ್ತದೆಯೆಂದರೇ ಆ ಯೋಜನೆಯನ್ನೇ ಮುಂದೂಡಿ
ಬಿಡುತ್ತಿದ್ದರೆಂದು ಇಬ್ಬರ ಬಳಿಯೂ ಕೆಲಸ ಮಾಡಿದ ಮಾಜಿ ಸಂಸದೀಯ ಮಂತ್ರಿ ಎಂ ಸಿ ನಾಣಯ್ಯ ವಿಶ್ಲೇಷಣಾತ್ಮಕವಾಗಿ ಹೋಲಿಸುತ್ತಾರೆ.
ಜನತಾ ಪರಿವಾರವೆಂದರೇ ಅದು ಹೆಗಡೆ ಹಾಗೂ ದೇವೇಗೌಡರ ಹೊಂದಾಣಿಕೆ ಮತ್ತು ವಿರಸದ ರಾಮಾಯಣ ಮಹಾಭಾರತ. 1985 ರ ಚುನಾವಣೆಯ ಬಹುಮತದ ನಂತರ ಪ್ರಶ್ನಾತೀತ ನಾಯಕರೆಂದುಕೊಂಡಿದ್ದೇ ಅವರ ಮುಂದಿನ ರಾಜಕೀಯ ಅಧಃಪತನಕ್ಕೆ ಮೂಲವಾಯಿತೆನ್ನಬಹುದು. ಬಾಟ್ಲಿಂಗ್, ರೇವಜೀತು ಭೂಮಿ, ಟೆಲಿಫೋನ್ ಕದ್ದಾಲಿಕೆಯ ಹಗರಣಗಳಲ್ಲಿ ಸಿಲುಕಿ ತಮ್ಮ ಬಲೆಯನ್ನು ತಾವೇ ಹೆಣೆದುಕೊಂಡುಬಿಟ್ಟಿದ್ದರು.
ಸರ್ಕಾರಕ್ಕೆ ಉತ್ತಮ ಹೆಸರು ತಂದು ಕೊಡಲು ಪೈಪೋಟಿಯ ಮೇಲೆ ಕೆಲಸ ಮಾಡುತ್ತಿದ್ದ ಮಂತ್ರಿ ಮಂಡಲದ ಸದಸ್ಯರಲಿ ಹಲವರನ್ನು ನಿಕೃಷ್ಟವಾಗಿ ಕಂಡದ್ದು , ನೀರಾವರಿಗೆ ಬಜೆಟ್ ನಲ್ಲಿ ತಾವು ಕೇಳಿದ 300 ಕೋಟಿ ಹಣವನ್ನು ಮೀಸಲಿಡಲಿಲ್ಲವೆಂಬ ಕಾರಣ ಮುಂದೊಡ್ಡಿ ರಾಜೀನಾಮೆಯಿತ್ತ ದೇವೇಗೌಡರ ಬಂಡಾಯವನ್ನು ಕಡೆಗಣಿಸಿದ್ದು ಹೆಗಡೆ ಅಧಿಕಾರ ತೊರೆಯುವಂತಾಯಿತು. ರಾಷ್ಟ್ರ ರಾಜಕಾರಣದ ಕನಸನ್ನು ಬಿಟ್ಟು ರಾಜ್ಯದ ಆಸಕ್ತಿ ತಳೆದಿದ್ದರೆ ಮುಂದೆ ಕಾಂಗ್ರೆಸ್ ಆಗಲೀ, ಈಗಿನ ಬಿಜೆಪಿಯಾಗಲೀ ಅಧಿಕಾರ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಮಟ್ಟಿಗೆ ಬಿಜೆಪಿಗೆ ಎರವಲು ಸೇವೆ ಮಾಡಿದ ಮೊದಲಿಗರು ಹೆಗಡೆ. ನಂತರ ಬಂಗಾರಪ್ಪ ಆಮೇಲೆ ಕುಮಾರಸ್ವಾಮಿಗಳು.
1985 ರ ನಂತರದಲ್ಲಿ ದೇಶದ ಭಾವಿ ಪ್ರಧಾನಿ ಎಂದು ಸಂಕೇತಿಸುತ್ತಿದ್ದ ಹೆಗಡೆಯವರು 91 ರ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಪರಾಭವಗೊಂಡು ಅವಮಾನ ಅನುಭವಿಸಿದರು. 83ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಅನಾಯಾಸವಾಗಿ ಕೂತದ್ದನ್ನು ವಿರೋಧಿಸಿದ್ದ ಕ್ರಾಂತಿರಂಗದ ನಾಯಕ ಬಂಗಾರಪ್ಪ ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಂಡಿದ್ದರು. ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಲೋಕಲ್ ರಾಜಕೀಯದಿಂದ ಅನ್ವರಿ ವಿರುದ್ಧ ಸೋಲುಂಡಿದ್ದು , ದೇವೇಗೌಡರು ಹಾಸನದಿಂದ ಪುಟ್ಟಸ್ವಾಮಿಗೌಡರನ್ನು ಹೆಡೆಮುರಿಕಟ್ಟಿ ಗೆದ್ದಿದ್ದು ಮುಂದಿನ ಜನತಾ ಪರಿವಾರದ ಮಿಲನಕ್ಕೆ ನಾಂದಿಯಾಗಿ 1994 ಡಿಸೆಂಬರ್ 11ರಂದು ಮಣ್ಣಿನ ಮಗ ಬಿರುದಾಂಕಿತ ಗೌಡರು ಪ್ರಯಾಸ ಪಟ್ಟು ಮುಖ್ಯಮಂತ್ರಿಯಾದರು,
ಹೆಗಡೆ ತಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸುವವರಲ್ಲ. ನಿಧಾನಗತಿಯಲ್ಲಿ ವೇಗದ ನಡಿಗೆ, ಅವರ ಚಾಣಾಕ್ಷತೆ ಆ ತನಕ ಎಲ್ಲೂ ಉದ್ವೇಗಕ್ಕೆ ಒಳಗಾಗದ ನಡೆ ಅವರದಾಗಿತ್ತಾದರೂ ದೇವೇಗೌಡರು ಪ್ರಧಾನಿ ಅಭ್ಯರ್ಥಿಯಾದಾಗ ಹೆಗಡೆ ಮಾತಿನಲ್ಲಿ ಜಾರಿಬಿದ್ದವರು ಆಮೇಲೆ ಚೇತರಿಸಿಕೊಳ್ಳಲೇ ಇಲ್ಲ. ದೇವೇಗೌಡರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಸಭೆಯಲ್ಲಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡಾ ಅಭ್ಯರ್ಥಿ ಎನ್ನುವ ಮೂಲಕ ಸಂಘರ್ಷ ಸೃಷ್ಟಿಸಿಕೊಂಡರು.
ಹಿಂದೆ ಸರಿದು ನಿಂತ ಪಟೇಲರನ್ನು ಉಪ ಮುಖ್ಯಮಂತ್ರಿ, ದೇವೇಗೌಡರನ್ನು ಮುಖ್ಯಮಂತ್ರಿ ಎಂದು ಅವರೇ ಘೋಷಿಸಿದ್ದರೇ ಜನರ ನಡುವೆ ಹೀರೋ ಆಗಿ ಸರ್ಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಅಂತಹ ಅವಕಾಶ ಕಳೆದುಕೊಂಡದ್ದಲ್ಲದೆ ಮುಂದೆ ಅವರ ಜೀವಮಾನದ ಕನಸಾಗಿದ್ದ ಪ್ರಧಾನಿ ಹುದ್ದೆಯ ಸಮೀಪ ನಿಂತು ಅದು ದೇವೇಗೌಡರ ಪಾಲಾದಾಗ ಕಣ್ಣು ತುಂಬಿಸಿಕೊಂಡು ತುಟಿಯಂಚಲ್ಲಿ ಸುಡುವ ಸಿಗರೇಟು ಹೊತ್ತಿಸಿಕೊಂಡು ಪ್ರೆಸ್ ಕ್ಲಬ್ ನಲ್ಲಿ ನಿಂತುಕೊಂಡೇ ಪತ್ರಿಕಾಗೋಷ್ಠಿ ನಡೆಸಿದ ಹೆಗಡೆ ಹೊಟ್ಟೆಯ ಕಿಚ್ಚನ್ನೆಲ್ಲಾ ಹೊರಹಾಕಿ, ಪಕ್ಷದಿಂದಲೂ ಹೊರ ಹಾಕಲ್ಪಟ್ಟರು.
ಹೊಸ ಚಿಂತನೆಯ ಪ್ರಬುದ್ಧ ಚಾಣಾಕ್ಷ ಹೆಗಡೆ ನೆಲ ಕಚ್ಚಿದ್ದರು. ಆದರೆ ಅವರ ಮೌಲ್ಯಾಧಾರಿತ ರಾಜಕಾರಣ, ಪಂಚಾಯತ್ ರಾಜ್ ವ್ಯವಸ್ಥೆ,
ಚುನಾವಣಪೂರ್ವ ಮೈತ್ರಿಯ ಘೋಷಣೆ,
ನಯ ನಾಜೂಕುತನದ ವಾಮನ ವ್ಯಕ್ತಿತ್ವ
ಇನ್ನೂ ರಾಜ್ಯದ ಜನತೆಯ ಮನಸಿನಲ್ಲಿ ಹಸಿರಾಗಿದೆ ಎನ್ನಬಹುದು.
– ವೈ ಜಿ ಅಶೋಕ್ ಕುಮಾರ್.