ಅನೇಕ ರೋಗಗಳಿಗೆ ಸಂಜೀವಿನ ಮದ್ದು ಆಷಾಡಿಬೇರು ಅಥವಾ ಶತಾವರಿಯ ದಿವ್ಯೌಷಧಿ
ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಆಷಾಡಿಬೇರು ಬಹಳಷ್ಟು ಮಹತ್ವದ ಔಷಧೀಯ ಗುಣಗಳನ್ನು ಹೊಂದಿದೆ.
ಆಷಾಡಿಬೇರು ಬುದ್ಧಿವರ್ಧಕ, ಅಗ್ನಿದೀಪಕ, ಪೌಷ್ಠಿಕ ಮತ್ತು ತಾಯಂದಿರಲ್ಲಿ ಎದೆಹಾಲಿನ ಉತ್ಪತ್ತಿ ಗುಣಹೊಂದಿರುವ ಸಸ್ಯ. ಇದನ್ನು ಹಿಂದಿ ಮತ್ತು ಸಂಸ್ಕೃತದಲ್ಲಿ ಶತಾವರೀ, ತುಳುವಿನಲ್ಲಿ ಉದ್ರಿಕಂಡೆ, ಇಂಗ್ಲೀಷ್ ನಲ್ಲಿ ವೈಲ್ಡ್ ಆಸ್ಪರಾಗಸ್ ಎಂದು ಕರೆಯುತ್ತಾರೆ. ಇನ್ನು ಇದಕ್ಕೆ ಅತಿರಸಾ, ಅರ್ಧಕಂಟಕ, ಇಂದೀವರಿ, ರಂಜಿನೀ, ಬಹುಮೂಲಾ, ಸೂಕ್ಷ್ಮಪತ್ರ, ಸಹಸ್ರಮಾಲೀ ಎಂಬ ಇನ್ನಿತರ ಹೆಸರುಗಳೂ ಇವೆ.
ಆಷಾಡಿಬೇರು ಉದ್ದವಾಗಿ, ಮರಗಿಡಗಳನ್ನು ಆಶ್ರಯಿಸಿ ಬೆಳೆಯುವ ಗಟ್ಟಿಯಾದ ಹಸಿರುಕಾಂಡವುಳ್ಳ, ಮುಳ್ಳುಗಳುಳ್ಳ ಒಂದು ಕುರುಚಲ ಬಳ್ಳಿ. ಎಲೆಗಳು ತೀರಾ ಚಿಕ್ಕವಾಗಿರುತ್ತವೆ. ಇದಕ್ಕೆ ನೂರಾರು ಬೇರುಗಳಿರುತ್ತವೆ ಹೀಗಾಗಿಯೇ ಇದಕ್ಕೆ ಶತಾವರೀ ಎಂಬ ಹೆಸರು ಬಂದಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹೂವು, ಕಾಯಿ ಬಿಡುವ ಈ ಬಳ್ಳಿಯು ಭಾರತದ ಎಲ್ಲಾ ಪ್ರಾಂತ್ಯಗಳಲ್ಲಿಯೂ ಕಂಡುಬರುತ್ತವೆ.
ಆಷಾಡಿಬೇರಿನಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಅವುಗಳೆಂದರೆ ಶತಾವರಿ ಮತ್ತು ಮಹಾಶತಾವರಿ. ಸಸ್ಯಶಾಸ್ತ್ರದಲ್ಲಿ ಇವುಗಳನ್ನು ಕ್ರಮವಾಗಿ ಆಸ್ಪರಾಗಸ್ ರೇಸ್ಮೋಸಸ್ ಮತ್ತು ಆಸ್ಪರಾಗಸ್ ಸೆರ್ಮಂಟೋಸಾ ಎಂದು ಕರೆಯುತ್ತಾರೆ. ಇದರ ಅತ್ಯಂತ ಉಪಯುಕ್ತ ಅಂಶ ಎಂದರೆ ಬೇರು.
ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಆಷಾಡಿಬೇರನ್ನು ಈ ಕೆಳಗಿನಂತೆ ವರ್ಣಿಸಿದ್ದಾರೆ.
“ಶತಾವರೀ ಗುರುಃ ಶೀತಾ ತಿಕ್ತಾ ಸ್ವಾದ್ವೀ ರಸಾಯನೀ
ಮೇಧಾಗ್ನಿಪುಷ್ಟಿದಾ ಸ್ನಿಗ್ಧಾ ನೇತ್ರ್ಯಾ ಗುಲ್ಮಾತಿಸಾರಜಿತ್”
ಎಂದರೆ ಆಷಾಡಿಬೇರು ಗುರು, ಸ್ನಿಗ್ಧ ಗುಣದಿಂದ ಕೂಡಿದ್ದು, ತಿಕ್ತ, ಮಧುರ ರಸದಿಂದ ಕೂಡಿದೆ, ಮಧುರ ವಿಪಾಕದಿಂದ ಕೂಡಿದೆ, ಶೀತವೀರ್ಯವುಳ್ಳದ್ದಾಗಿದೆ, ರಸಾಯನವಾಗಿದೆ, ಬುದ್ಧಿವರ್ಧಕ, ಅಗ್ನಿದೀಪಕ, ನೇತ್ರ್ಯವಾಗಿದೆ. ಗುಲ್ಮ ಅತಿಸಾರದ ರೋಗಗಳನ್ನು ನಿವಾರಿಸುತ್ತದೆ ಎಂದು ವರ್ಣಿಸಿದ್ದಾರೆ.
ಈಗ ಇದರ ಔಷಧೀಯ ಗುಣಗಳ ಬಗ್ಗೆ ತಿಳಿಯೋಣ:-
ಶತಾವರಿ ಲೇಪವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಅತಿಸಾರ ರೋಗವು ಕಡಿಮೆಯಾಗುತ್ತದೆ. ಇದರ ಬೇರಿನ ಚೂರ್ಣವನ್ನು ಸಕ್ಕರೆ ಮಿಶ್ರಿತ ಹಾಲಿನೊಂದಿಗೆ ಕಲಸಿ ಕುಡಿಯುವುದರಿಂದ ನಿಶ್ಯಕ್ತಿ, ನಿರುತ್ಸಾಹ ನಿವಾರಣೆಯಾಗುತ್ತದೆ. ಶತಾವರಿ ಬೇರಿನ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ತಾಯಿಯ ಎದೆಹಾಲು ವೃದ್ಧಿಯಾಗುತ್ತದೆ. ಬೇರಿನ ಚೂರ್ಣದಿಂದ ಕಷಾಯ ಮಾಡಿ ಅದನ್ನು ಹಾಲಿನೊಂದಿಗೆ ಕುಡಿಯುವುದರಿಂದ ಸ್ತ್ರೀರೋಗಗಳಿಗೆ ಒಳ್ಳೆಯದು. ಆಷಾಡಿಬೇರು ಮತ್ತು ನಾಗಬಲವನ್ನು ತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ಶತಾವರಿ ಬೇರು, ಅಶ್ವಗಂಧ ಮತ್ತು ನೆಲಗುಂಬಳಗಡ್ಡೆ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ದಿನಕ್ಕೆ ಎರಡುಬಾರಿ ಸೇವಿಸಿದರೆ ಅಜೀರ್ಣ ಮತ್ತು ಮೂತ್ರರೋಗಕ್ಕೆ ಒಳ್ಳೆಯದು. ಇದರ ಲೇಪವನ್ನು ಹಾಲಿನೊಂದಿಗೆ ಕುಡಿದರೆ ರಕ್ತಬೇದಿ ನಿಲ್ಲುತ್ತದೆ.
ಇದು ಮೂಲವ್ಯಾಧಿಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಷಾಡಿಬೇರು ಮತ್ತು ಅಮೃತಬಳ್ಳಿಯ ಸಮಪ್ರಮಾಣದ ಸರವನ್ನು ಬೆಲ್ಲದೊಂದಿಗೆ ಸೇವಿಸಿದರೆ ಜ್ವರ ನಿವಾರಣೆಯಾಗುತ್ತದೆ. ಇದರ ಬೇರನ್ನು ಹಾಲಿನಲ್ಲಿ ತೇದು ಸೇವಿಸುವುದರಿಂದ ಸ್ತನ್ಯಕ್ಷಯಕ್ಕೆ ಉಪಶಮನ ಸಾಧ್ಯ. ಒಂದು ಚಮಚದಷ್ಟು ಶತಾವರಿ ಬೇರಿನ ರಸವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಮೂತ್ರದ ಕಲ್ಲುಗಳು ಕರಗುತ್ತವೆ. ಶತಾವರಿ ಮತ್ತು ನೆಲ್ಲಿಯ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಜೇನು ಸೇರಿಸಿ ತೆಗೆದುಕೊಳ್ಳುವುದರಿಂದ ಮಧುಮೇಹ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು