ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿದ ಬಾಂಬ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಕೆಲ ನಟ-ನಟಿಯರು ಡ್ರಗ್ಸ್ ಸೇವನೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಅಪಘಾತಗಳಲ್ಲಿ ಡ್ರಗ್ಸ್ ಸೇವಿಸಿದ್ದು ಗೊತ್ತಿದ್ದರೂ ಪೊಲೀಸರು ಒತ್ತಡಕ್ಕೆ ಮಣಿದು ಸುಮ್ಮನಾಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಸಿಡಿಸಿದ ಸ್ಫೋಟಕ ಹೇಳಿಕೆ ಸ್ಯಾಂಡಲ್‍ವುಡ್‍ನ ಘಟಾನುಘಟಿಗಳಲ್ಲಿ ನಡುಕ ಹುಟ್ಟಿಸಿದೆ.
ಈ ಬಗ್ಗೆ ವಿಡಿಯೋ ಸಂದೇಶ ಕಳಿಸಿರುವ ನಟಿ, ನಿರ್ಮಾಪಕಿ ಶರ್ಮಿಳಾ ಮಾಂಡ್ರೆ, ಈವರೆಗೂ ನನಗೆ ಡ್ರಗ್ಸ್‍ನ ಯಾವುದೇ ಅನುಭವ ಆಗಿಲ್ಲ ಎಂದು ಸ್ಪಷ್ಟಡಿಸಿದ್ದಾರೆ.
ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಅಲ್ಲದೆ ನಾನು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದೇನೆ. ನನ್ನ ತಂದೆ, ತಾತ ಕೂಡ ಸಿನಿಮಾ ನಿರ್ಮಾಪಕರು. ಇಂದಿನವರೆಗೂ ನನಗೆ ಈ ರೀತಿಯ ಅನುಭವ ಎಂದಿಗೂ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಲಾಕ್‍ಡೌನ್ ವೇಳೆ ಶರ್ಮಿಳಾ ಮಾಂಡ್ರೆ ರಾತ್ರಿ ವೇಳೆ ಐಶಾರಾಮಿ ಕಾರಿನಲ್ಲಿ ಜಾಲಿರೈಡ್ ಮಾಡಲು ಹೋಗಿ ವಸಂತನಗರದಲ್ಲಿ ಡಿವೈಡರ್‍ಗೆ ಡಿಕ್ಕಿ ಹೊಡೆಸಿದ್ದರು. ಈ ವೇಳೆ ಅವರು ಡ್ರಗ್ಸ್ ಸೇವನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಘಟನೆಯನ್ನೇ ಇಂದ್ರಜಿತ್ ಲಂಕೇಶ್ ಪರೋಕ್ಷ ಉಲ್ಲೇಖ ಮಾಡಿದ ಹಿನ್ನೆಲೆಯಲ್ಲಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ ನೀಡಿದ್ದಾರೆ.