ಆಪ್ತ ಗೆಳೆಯ ರಕ್ಷಕನಾಗಲಿಲ್ಲ… ಹೀಗಾಗಿ ಸಿಎಸ್‍ಕೆ ಮನೆಯಿಂದ ಹೊರಬಂದ ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್… ಅಂದ ತಕ್ಷಣವೇ ನೆನಪಾಗೋದು ನಾಯಕ ಮಹೇಂದ್ರ ಸಿಂಗ್ ಧೋನಿ… ಆ ನಂತರ ಸುರೇಶ್ ರೈನಾ… ತಲೈವಾ.. ಚಿನ್ನ ತಲೈವಾ ಅಂತನೇ ಸಿಎಸ್‍ಕೆ ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದ್ದ ಪದಗಳು. ಅಷ್ಟೊಂದು ಗೌರವ, ಹೆಮ್ಮೆ ಮತ್ತು ಪ್ರೀತಿಯನ್ನಿಟ್ಟುಕೊಂಡಿದ್ದರು.
ಹೌದು, ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠ ತಂಡ ಸಿಎಸ್‍ಕೆ.. ಅಷ್ಟೇ ಅಲ್ಲ, ಒಗ್ಗಟ್ಟಿನ ತಂಡ.. ಆಟಗಾರರ ನಡುವಿನ ಬಾಂಧವ್ಯ ಅಷ್ಟೊಂದು ಗಟ್ಟಿಯಾಗಿತ್ತು. ಆದ್ರೆ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಅಂದುಕೊಂಡಂತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಸಿಎಸ್‍ಕೆಯ ಇಡೀ ತಂಡವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಧೋನಿ ಪ್ರಭಾವ ಕೂಡ ಕಮ್ಮಿಯಾಗಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ.
ಇದಕ್ಕೆ ಕಾರಣ… ಸುರೇಶ್ ರೈನಾ ಅವರ ಆ ಒಂದು ನಿರ್ಧಾರ… ಮೇಲ್ನೋಟಕ್ಕೆ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ. ರೈನಾ ಅವರ ಸೋದರತ್ತೆಯ ಕುಟುಂಬದ ಮೇಲೆ ಅನಾಮಿಕರು ದಾಳಿ ನಡೆಸಿದ್ದಲ್ಲದೆ, ಅವರ ಮಾವನನ್ನು ಕೊಂದು ಹಾಕಿದ್ದಾರೆ. ರೈನಾ ಅತ್ತೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ರೈನಾ ಮಾನಸಿಕವಾಗಿ ಖಿನ್ನರಾಗಿ ಸಿಎಸ್‍ಕೆ ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಸಿಎಸ್‍ಕೆ ತಂಡದಿಂದ ಮತ್ತೊಂದು ಸುದ್ದಿ ಹೊರಬರುತ್ತಿದೆ. ಮೊದಲೇ ಸಿಎಸ್‍ಕೆ ಪಾಳೆಯದಲ್ಲಿ ಕೋವಿಡ್ -19 ಆತಂಕ ಮನೆ ಮಾಡಿದೆ. ಈಗಾಗಲೇ ಸಿಎಸ್‍ಕೆಯ ಇಬ್ಬರು ಆಟಗಾರರು ಹಾಗೂ 11 ಸಿಬ್ಬಂದಿಗಳು ಸೇರಿದಂತೆ ಒಟ್ಟು 13 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಮತ್ತೊಂದೆಡೆ ಸುರೇಶ್ ರೈನಾ ಅವರು ಅನಿರೀಕ್ಷಿತವಾಗಿ ತಂಡದಿಂದ ಹೊರ ನಡೆದಿದ್ದಾರೆ.
ವೈಯಕ್ತಿಕ ಆಘಾತ ಒಂದು ಕಡೆಯಾದ್ರೆ, ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಅವರಿಗೆ ದುಬೈನಲ್ಲಿ ಸರಿಯಾದ ಹೊಟೇಲ್ ರೂಮ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಸುರೇಶ್ ರೈನಾ ಇರುವ ಕೊಠಡಿಯಲ್ಲಿ ಬಾಲ್ಕನಿ ವ್ಯವಸ್ಥೆ ಇಲ್ಲ. ಸುರೇಶ್ ರೈನಾ ಧೋನಿಗೆ ನೀಡಿರುವ ಕೊಠಡಿಯಂತೆ ತನಗೂ ನೀಡಬೇಕು ಎಂದು ಕೇಳಿದ್ದರು. ಇದಕ್ಕೆ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಒಪ್ಪಿಲ್ಲ. ಧೋನಿ ಕೂಡ ಇಲ್ಲಿ ರೈನಾ ಪರ ಬ್ಯಾಟಿಂಗ್ ಮಾಡಲು ವಿಫಲರಾದ್ರು. ಹೀಗಾಗಿ ರೈನಾ ಸಿಟ್ಟು ಮಾಡಿಕೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ ಅಂತನೂ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಸ್‍ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರು ರೈನಾ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರೇಶ್ ರೈನಾ ನಂಬಿಕೆಗೆ ಅರ್ಹನಾದವರಲ್ಲ ಎಂಬ ಧಾಟಿಯಲ್ಲಿ ಪ್ರೀಮಾ ದೊನ್ನಾ ಅಂತ ಹೇಳಿದ್ದಾರೆ. ಸಿಎಸ್‍ಕೆ ತಂಡ ಒಂದು ಕುಟುಂಬವಿದ್ದಂತೆ. ಎಲ್ಲಾ ಹಿರಿಯ ಆಟಗಾರರು ಸಹಬಾಳ್ವೆಯನ್ನು ಕಲಿತಿದ್ದಾರೆ. ಹಾಗಂತ ನಿಮಗೆ ಇಷ್ಟವಿಲ್ಲ.. ಅಸಮಾಧಾನವಿದೆ ಎಂಬುದಾದ್ರೆ ಹೋಗಿ.. ನಾನು ಯಾರನ್ನು ಒತ್ತಾಯ ಮಾಡುವುದಿಲ್ಲ. ಕೆಲವೊಂದು ಬಾರಿ ಯಶಸ್ಸು ತಲೆ ಸುತ್ತುವಂತೆ ಮಾಡುತ್ತೆ ಎಂದು ಶ್ರೀನಿವಾಸನ್ ರೈನಾ ವಿರುದ್ಧ ಕಿಡಿ ಕಾರಿದ್ದಾರೆ.
ಸುರೇಶ್ ರೈನಾ ತಂಡದಿಂದ ಹೊರನಡೆದಿರುವುದರಿಂದ ಯುವ ಆಟಗಾರ ರುತುರಾಜ್ ಗಾಯಕ್ವಡ್‍ನಂತಹ ಯುವ ಆಟಗಾರರಿಗೆ
ಅವಕಾಶ ಸಿಗಬಹುದು. ರುತುರಾಜ್ ಅದ್ಭುತ ಆಟಗಾರ. ಬಹುಶಃ ಈ ಟೂರ್ನಿಯಲ್ಲಿ ಆತ ಸ್ಟಾರ್ ಆಟಗಾರನಾಗಬಹುದು. ಯಾರಿಗೂ ಗೊತ್ತು.. ನನಗೆ ಅದ್ಭುತವಾದ ನಾಯಕನಿದ್ದಾನೆ. ಧೋನಿ ಏನು ಬೇಕಾದ್ರೂ ಮಾಡಬಹುದು. ತಂಡದ ಆಟಗಾರರಿಗೆ ಆತ್ಮವಿಶ್ವಾಸವನ್ನು ತುಂಬುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ಸುರೇಶ್ ರೈನಾಗೆ ಸ್ವಲ್ಪ ಮೃದು ಧೋರಣೆ ವ್ಯಕ್ತಪಡಿಸಿರುವ ಶ್ರೀನಿವಾಸನ್, ಟೂರ್ನಿ ಇನ್ನೂ ಆರಂಭವಾಗಿಲ್ಲ. ರೈನಾ ಮತ್ತೆ ತಂಡವನ್ನು ಸೇರಿಕೊಳ್ಳಬಹುದು. ಸಿಎಸ್‍ಕೆ ತಂಡದಲ್ಲಿ ರೈನಾಗೆ ಬಾಗಿಲು ತೆರೆದಿರುತ್ತದೆ. ಒಂದು ವೇಳೆ ಬರಲಿಲ್ಲ ಅಂದ್ರೆ ಅವರಿಗೆ ನಷ್ಟವಾಗುವುದು. ಒಂದು ಐಪಿಎಲ್ ಟೂರ್ನಿಗೆ ರೈನಾ 11 ಕೋಟಿ ರೂಪಾಯಿ ಸಂಭಾವಣೆ ಪಡೆದುಕೊಳ್ಳುತ್ತಾರೆ. ಅವರು ಬಂದಿಲ್ಲ ಅಂದ್ರೆ ಅವರು ಹಣವನ್ನು ಕಳೆದುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.








