ಸ್ವರ್ಣ ನದಿಯಲ್ಲಿ ಕೊಳಲನೂದುವ ಗೋಪಾಲ ಕೃಷ್ಣನ ಪಂಚಲೋಹದ ವಿಗ್ರಹ ಪತ್ತೆ
ಉಡುಪಿ, ಸೆಪ್ಟೆಂಬರ್01: ಸೋಮವಾರ ರಾತ್ರಿ ಬೆಳ್ಳಂಪಳ್ಳಿಯ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗಡೆ ಕೊಳಲನೂದುವ ಗೋಪಾಲ ಕೃಷ್ಣನ ಪಂಚಲೋಹದ ವಿಗ್ರಹ ಪತ್ತೆಯಾಗಿದೆ.
ಹವ್ಯಾಸಿ ಸ್ಥಳೀಯ ಮೀನುಗಾರರು ರಾತ್ರಿ 8:00 ಗಂಟೆ ಸುಮಾರಿಗೆ ಗಾಳ ಹಾಕುತ್ತಿದ್ದ ಸಂದರ್ಭದಲ್ಲಿ ಸೇತುವೆ ಕೆಳಗಡೆ ನೀರಿನಲ್ಲಿ ಹೊಳೆಯುತ್ತಿರುವ ವಸ್ತುವೊಂದನ್ನು ಕಂಡಿದ್ದಾರೆ.
ಕೂಡಲೇ ಸ್ಥಳೀಯರಾದ ಪುರಂದರ ಕೋಟ್ಯಾನ್ ರಾಕೇಶ್, ನಿಶಾನ್, ರಿತಿಕ್, ನವೀನ್ , ಆತ್ರಾಡಿ ದಿನೇಶ್ ಪೂಜಾರಿ ಮತ್ತು ಅವರ ತಂಡ ಸ್ವರ್ಣ ನದಿಗೆ ಜಿಗಿದು ವಸ್ತುವನ್ನು ಮೇಲೆತ್ತಿದಾಗ, ಅದು ಕೊಳಲನೂದುವ ಗೋಪಾಲಕೃಷ್ಣನ ಪಂಚಲೋಹದ ವಿಗ್ರಹ ಎಂದು ಕಂಡುಬಂದಿದೆ.
ಸ್ಥಳೀಯ ಮುಖಂಡರಾದ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ಈ ವಿಗ್ರಹ ಸುಮಾರು ಎಂಟು ಕೆ.ಜಿ ತೂಕ ಹೊಂದಿದೆ ಎಂದು ತಿಳಿಸಿದ್ದಾರೆ. ಈ ವಿಗ್ರಹವನ್ನು ಹಿರಿಯಡ್ಕ ಠಾಣೆಗೆ ಒಪ್ಪಿಸಲಾಗಿದ್ದು, ಮುಂದಿನ ತನಿಖೆ ನಡೆಯಲಿದೆಯೆಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.








