ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆರ್ಥಿಕತೆಯನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಖಂಡ್ರೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಕ್ಟ್ ಆಫ್ ಗಾಡ್ ಎನ್ನುವ ಕೇಂದ್ರದ ನರೇಂದ್ರಮೋದಿ ಸರ್ಕಾರ ಈಗ ದೇಶದ ಅರ್ಥಿಕತೆಯನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳಿರುವುದು ಅಂಕಿ ಅಂಶ ಸಮೇತವಾಗಿ ರುಜುವಾತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ದೇಶದ ಜಿಡಿಪಿ ಶೇ.29.9ರಷ್ಟು ಋಣಾತ್ಮಕ ಕುಸಿತ ಕಂಡಿದೆ. ಇದು ಸಾರ್ವಕಾಲಿಕ ಕುಸಿತ ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಿದ್ದರೂ ದೇಶದಲ್ಲಿ ಎಲ್ಲವೂ ಸರಿ ಇದೆ ಎಂಬಂತೆ ಬಿಂಬಿಸುತ್ತಾ ಕೇವಲ ಚಪ್ಪಾಳೆ ಹೊಡೆದು ದೀಪ ಹಚ್ಚಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಇನ್ನೆಷ್ಟು ದಿನ ಜನರನ್ನು ಕತ್ತಲಿನಲ್ಲಿಡುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ.








