ಬೆಂಗಳೂರು: ಡ್ರಗ್ಸ್ ಘಾಟಿನಿಂದ ಸ್ಯಾಂಡಲ್‍ವುಡ್ ತತ್ತರಿಸಿ ಹೋಗಿರುವ ಬೆನ್ನಲ್ಲೇ ಪರಿಹಾರದ ಮಾರ್ಗೋಪಾಯ ಹುಡುಕಬೇಕಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿಕಾರಿದ್ದು ವಿಶೇಷವಾಗಿತ್ತು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾ.ರಾ ಗೋವಿಂದು, ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಹಲವರು ಪಾಲ್ಗೊಂಡಿದ್ದರು.
ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟಿನ ಬಗ್ಗೆ ಇಂದ್ರಜಿತ್ ಲಂಕೇಶ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ. ಪ್ರಶಾಂತ್ ಸಂಬರಗಿ ಗಾಂಧಿನಗರ ಗಾಂಜಾ ನಗರ ಆಗಿದೆ ಎಂದು ಹೇಳಿಕೆ ನೀಡಿರುವುದಕ್ಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಂದು ವೇಳೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪ ಸಾಬೀತಾಗದೇ ಹೋದರೆ ಛೀಮಾರಿ ಹಾಕಿ ಚಿತ್ರರಂಗದಿಂದ ಬಹಿಷ್ಕರಿಸುವ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್, ಕನ್ನಡ ಚಿತ್ರರಂಗದ ವಿರುದ್ಧ ಆರೋಪ ಮಾಡುವ ಮೊದಲು ಇಂದ್ರಜಿತ್ ಲಂಕೇಶ್ ವಾಣಿಜ್ಯ ಮಂಡಳಿಯನ್ನು ಸಂಪರ್ಕ ಮಾಡಬೇಕಿತ್ತು. ಅವರೂ ಕೂಡ ಮಂಡಳಿ ಸದಸ್ಯರು. ಹೀಗಾಗಿ ಮಂಡಳಿಯನ್ನು ಸಂಪರ್ಕಿಸದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ. ಅವರು ಮಾಡಿದ ಆರೋಪ ಸಾಬೀತಾಗದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪ ಕೋರ್ಟ್‍ನಲ್ಲಿ ಬಿದ್ದು ಹೋಗುತ್ತದೆ. ಆರೋಪ ಸಾಬೀತಾಗದಿದ್ದರೆ ಇಂದ್ರಜಿತ್‍ಗೆ ಫಿಲ್ಮ್ ಇಂಡಸ್ಟ್ರಿಯಿಂದ ಛೀಮಾರಿ ಹಾಕುತ್ತೇವೆ. ಅವರನ್ನು ಕನ್ನಡ ಚಿತ್ರರಂಗದ ಚಟುವಟಿಕೆಯಿಂದ ದೂರ ಇಡುತ್ತೇವೆ ಎಂದರು.
ಇಂದ್ರಜಿತ್ ಲಂಕೇಶ್ ಡ್ರಗ್ಸ್ ನಂಟಿನ ಬಗ್ಗೆ ಸಾಮಾಜಿಕ ಕಳಕಳಿಯಿಂದ ಮಾಹಿತಿ ನೀಡಿದ್ದಾರೆ. ಅವರು ಯಾರ ವಿರುದ್ಧ ಆರೋಪ ಮಾಡಿದ್ದಾರೋ ಅವರ ವಿರುದ್ಧ ಆರೋಪ ಸಾಬೀತಾದ್ರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ನಮಗೆ ಮಾಹಿತಿ ನೀಡದೇ ಮುಂದುವರೆದಿದ್ದಾರೆ. ಪರಿಸ್ಥಿತಿ ನಮ್ಮ ಕೈ ಮೀರಿ ಹೋಗಿದೆ. ಇಂದ್ರಜಿತ್ ಲಂಕೇಶ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸಾ.ರಾ ಗೋವಿಂದ್ ಅಸಮಾಧಾನ ವ್ಯಕ್ತಪಡಿಸಿದರು.
ಇಂದ್ರಜಿತ್ ಆರೋಪದಿಂದ ನಮಗೆ ಶಾಕ್ ಆಗಿದೆ. 75 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಇಂತಹ ಕೆಲಸ ಆಗಿರಲಿಲ್ಲ. ತೆವಲಿಗೆ ಬಂದವರು ಈ ರೀತಿ ಮಾಡುತ್ತಾರೆ. ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಒಂದೆರಡು ಚಿತ್ರ ಮಾಡಿದ ಕಾರಣಕ್ಕೆ ಕೆಲವರನ್ನು ಕಲಾವಿದ ಎಂದು ಹೇಳಲು ಆಗಲ್ಲ ಎಂದು ಸಾ.ರಾ ಗೋವಿಂದ್ ಕಿಡಿಕಾರಿದರು.
ಪ್ರಶಾಂತ್ ಸಂಬರಗಿ ಚಿತ್ರೋದ್ಯಮಿ ಅನ್ನಬೇಡಿ
ಪ್ರಶಾಂತ್ ಸಂಬರಗಿಗೂ ಕನ್ನಡ ಚಿತ್ರರಂಗಕ್ಕೂ ಸಂಬಂಧವೇ ಇಲ್ಲ, ಆತ ಚಿತ್ರೋದ್ಯಮಿ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಚಟುವಟಿಕೆಯಲ್ಲಿ ಆತ ತೊಡಗಿಸಿಕೊಂಡಿಲ್ಲ. ಒಂದೇ ಒಂದು ಚಿತ್ರ ನಿರ್ಮಾಣ ಮಾಡಿಲ್ಲ, ಹಂಚಿಕೆ ಮಾಡಿಲ್ಲ, ನಿರ್ದೇಶನ ಮಾಡಿಲ್ಲ.
ಹೀಗಾಗಿ ಪ್ರಶಾಂತ್ ಸಂಬರಗಿ ಅವರನ್ನು ಚಿತ್ರೋದ್ಯಮಿ ಎನ್ನಬೇಡಿ. ಬೇಕಾದರೆ ಸಾಮಾಜಿಕ ಕಾರ್ಯಕರ್ತ ಅಂದುಕೊಳ್ಳಲಿ ಎಂದು ಸಾ.ರಾ ಗೋವಿಂದ್ ಸ್ಪಷ್ಟಪಡಿಸಿದ್ದಾರೆ.