ಭವ್ಯ ಭಾರತದ ನಿರ್ಮಾತೃಗಳಾದ ಗುರುಗಳಿಗೆ ನಮನ
ಮಂಗಳೂರು, ಸೆಪ್ಟೆಂಬರ್05: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರದಾಸರು ಗುರುವಿನ ಮಹತ್ವವನ್ನು, ಗುರು-ಶಿಷ್ಯರ ಸಂಬಂಧವನ್ನು ಬಹು ಚೆನ್ನಾಗಿ ನಿರೂಪಿಸಿದ್ದಾರೆ. ಡಿ.ವಿ.ಜಿ ಯವರು ಪರಮತತ್ತ್ವ ಕಂಡ ಗುರುವನರಸುವುದೆಲ್ಲಿ?
ದೊರೆತಂದು ನೀಂ ಧನ್ಯ – ಮಂಕುತಿಮ್ಮ ಎಂದಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯ ದೃಷ್ಟಿಯಲ್ಲಿ ಗುರು ಎಂದರೆ ಜ್ಞಾನದ ವಾಹಕ. ಅಜ್ಞಾನದ ಕಣ್ಣನ್ನು ತೆರೆಯಿಸಿ ಜ್ಞಾನದ ಬೆಳಕನ್ನು ನೀಡುವವನು.
ಎಲ್ಲಾ ಶಿಕ್ಷಕರನ್ನು ಶಿಕ್ಷಕ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಶಿಕ್ಷಕ ಎನ್ನುವುದು ಹುದ್ದೆಯಲ್ಲ. ಅದೊಂದು ಸೇವೆ. ದೇಶದ ಮುಂದಿನ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಹೊಂದಿರುವವನು ಶಿಕ್ಷಕ. ಆದ್ದರಿಂದ ಶಿಕ್ಷಕ ವೃತ್ತಿ ಮಹತ್ವವಾದದ್ದು. ವಿಷಯದ ಬಗ್ಗೆ ಆಸಕ್ತಿ ಮೂಡುವಂತೆ ಪಾಠ ಮಾಡಲು ಸಾಕಷ್ಟು ಪೂರ್ವ ತಯಾರಿಯೂ ಬೇಕು. ಸಿಲೆಬಸ್ ಸಮಯಕ್ಕೆ ಸರಿಯಾಗಿ ಮುಗಿಸಬೇಕೆಂಬ ತರಾತುರಿಗಿಂತ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿ ಹೇಳಬೇಕು.
ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರ ಮಾತೇ ವೇದವಾಕ್ಯ. ಶಿಕ್ಷಕರು ತಪ್ಪು ಹೇಳಿದರೂ ಸರಿ , ಅದೇ ಸರಿ ಎಂದು ಮಕ್ಕಳು ವಾದಿಸುವುದನ್ನು ನಾವು ಕಾಣುತ್ತೇವೆ. ತಮ್ಮ ಮೇಲಿರುವ ಮಹತ್ವದ ಜವಾಬ್ದಾರಿಯನ್ನು ಅರಿತು ಶಿಕ್ಷಕರು ಮಕ್ಕಳಿಗೆ ಬೋಧಿಸುತ್ತಾ ಹೋದರೆ ವಜ್ರ ಸದೃಶ ಯುವ ಜನಾಂಗ ನಿರ್ಮಾಣವಾಗುತ್ತದೆ. ಶಿಕ್ಷಕರ ವ್ಯಕ್ತಿತ್ವ ಕೂಡ ಈ ನಿಟ್ಟಿನಲ್ಲಿ ಪ್ರಮುಖವಾದದ್ದು. ಮಕ್ಕಳು ಶಿಕ್ಷಕರನ್ನು ಆದರ್ಶವಾಗಿಟ್ಟುಕೊಳ್ಳುವುದರಿಂದ ಶಿಕ್ಷಕರ ಮಾತು, ನಡವಳಿಕೆ ಮಾದರಿಯಾಗಿರಬೇಕು. ಮಕ್ಕಳು ಶಿಕ್ಷಕರನ್ನು ಅನುಸರಿಸುವುದನ್ನು ನೋಡಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಧನಾತ್ಮಕ ಮೌಲ್ಯಗಳನ್ನು ತಮ್ಮ ವರ್ತನೆಯಲ್ಲಿ ತೋರಿಸಿಕೊಡಬೇಕು. ಶಿಕ್ಷಕರು ತಮ್ಮ ವೃತ್ತಿ ಧರ್ಮವನ್ನು ಅರಿತು ಎಲ್ಲಾ ವಿದ್ಯಾರ್ಥಿಗಳಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಶಿಕ್ಷಕರಾದವರಿಗೆ ಕರ್ತವ್ಯ ಪ್ರಜ್ಞೆ, ಸೃಜನಶೀಲತೆ, ಸಮಯ ಪ್ರಜ್ಞೆ ಇರಬೇಕು. ವಿದ್ಯಾರ್ಥಿಗಳಲ್ಲಿ ಪ್ರೀತಿ ವಿಶ್ವಾಸಗಳನ್ನು ಹಂಚಬೇಕು. ಈ ಎಲ್ಲಾ ಗುಣಗಳನ್ನು ಹೊಂದಿರುವ ಶಿಕ್ಷಕರು ವಿದ್ಯಾರ್ಥಿಗಳ ಹೃದಯ ಮಂದಿರದಲ್ಲಿ ನೆಲೆಗೊಳ್ಳುತ್ತಾರೆ.
ಪ್ರಸ್ತುತ 2020 ವರ್ಷದಲ್ಲಿ ಶಿಕ್ಷಕರಿಗೆ ಬಹು ದೊಡ್ಡ ಸವಾಲು ಎದುರಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಬದಲಾದ ಕಾಲಘಟ್ಟದಲ್ಲಿ ಬದಲಾವಣೆಗಳಿಗೆ ಹೊಂದಿಕೊಳ್ಳ ಬೇಕಾದ ಅನಿವಾರ್ಯತೆ ಗೆ ಒಳಪಟ್ಟವರಲ್ಲಿ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ. ಈ ದಿನಗಳಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮಾಧ್ಯಮಗಳ ಮೂಲಕ ಕಲಿಸುತ್ತಿದ್ದಾರೆ ಮತ್ತು ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ಆಯೋಜಿಸುತ್ತಿದ್ದಾರೆ.
ಈ ಕಠಿಣ ಸಮಯವು ಸಮಾಜದಲ್ಲಿ ಶಿಕ್ಷಕರ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಭವಿಷ್ಯದ ಪೀಳಿಗೆಗೆ ಪ್ರೇರಣೆಯಾಗಿರುವ ಶಿಕ್ಷಕರನ್ನು ಇಂದು ಹೃದಯಪೂರ್ವಕವಾಗಿ ನಮಿಸೋಣ. ಭವ್ಯ ಭಾರತದ ನಿರ್ಮಾತೃಗಳಾದ ಶಿಕ್ಷಕರಿಗೆ ಸಾಕ್ಷಟಿವಿ.ಕಾಮ್ ಓದುಗರ ವತಿಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..