ಬೆಂಗಳೂರು: ರಾಗಿಣಿ ಕೇಸ್ ಮುಚ್ಚಿಹಾಕೋಕೆ ಒತ್ತಡವಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ‘ಸಿ.ಟಿ.ರವಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಯಾರ ಒತ್ತಡ ಅನ್ನೋದನ್ನು ಬಹಿರಂಗಪಡಿಸಲಿ” ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಣಿ ಪ್ರಕರಣ ಮುಚ್ಚಿ ಹಾಕೋಕೆ ಯಾರ ಒತ್ತಡ ಇದೆ ಎಂದು ಸಚಿವ ಸಿ.ಟಿ ರವಿ ಬಹಿರಂಗಪಡಿಸಲಿ. ಅವರು ಹೇಳೋಕೆ ಆಗದಿದ್ದರೆ ಸಿಸಿಬಿ ಮುಂದೆ ಹೇಳಲಿ. ಯಾರ ಒತ್ತಡವಿದೆ ಅಂತ ಅಲ್ಲಿ ಹೇಳಲಿ. ಗೊತ್ತಿದ್ದೂ ಅದನ್ನ ಮುಚ್ಚಿಟ್ಟರೆ ಅದು ತಪ್ಪಾಗಲಿದೆ ಎಂದರು.
ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರಿಯಾಂಕ್ ಖರ್ಗೆ, ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಕುಸಿದಿದ್ದು, ಕಳೆದ ಆರು ತಿಂಗಳಿಂದ ಸರ್ಕಾರ ನೀಲನಕ್ಷೆ ತಯಾರಿಸಿಲ್ಲ. ಮಕ್ಕಳಿಗೆ ಹೇಗೆ ಪಾಠ ಮಾಡಬೇಕು. ಶಿಕ್ಷಕರಿಗೆ ಯಾವ ಸೂಚನೆ ಕೊಡಬೇಕು. ಇದರ ಬಗ್ಗೆ ಎಲ್ಲಿಯೂ ಸರ್ಕಾರ ಚಿಂತನೆ ನಡೆಸಿಲ್ಲ. ಖಾಸಗಿ ಶಾಲೆಯಲ್ಲಿ ಆನ್ ಲೈನ್ ಶಿಕ್ಷಣ ತಂದಿದ್ದಾರೆ. 80 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿದ್ದಾರೆ. 62.5%ರಷ್ಟು ಮಕ್ಕಳಿಗೆ ಸ್ಮಾರ್ಟ್ ಫೋನ್ ಇದೆ. ಲ್ಯಾಪ್ ಟಾಪ್ ಕೂಡ ಲಭ್ಯವಿದೆ. ಶೇ. 53.75%ರಷ್ಟು ಮಕ್ಕಳಿಗೆ ಇಂಟರ್ ನೆಟ್ ಸೌಲಭ್ಯವಿದೆ. ಆದರೆ ಉಳಿದ ಮಕ್ಕಳಿಗೆ ಯಾವ ಸೌಲಭ್ಯವೂ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಸೌಲಭ್ಯ ಶೂನ್ಯ. ಗ್ರಾಮೀಣ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯ ಸರಿಯಿಲ್ಲ. ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳಿವೆ. 7,377 ಅನುದಾನಿತ ಶಾಲೆಗಳಿವೆ. 18,760 ಖಾಸಗಿ ಶಾಲೆಗಳಿವೆ. ಪ್ರತಿ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದರು.