ಮೈಸೂರು : ಡ್ರಗ್ಸ್ ದಂಧೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೆ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದ ವಿಚಾರ ಭಾರಿ ಚರ್ಚೆಗೆ ಬಂದಿದ್ದು, ಈ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಅವರು ಪ್ರತಿಕ್ರಿಯಿಸಿ, ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪರ ಪ್ರಚಾರ ನಡೆಸಿರಬಹುದು. ಆದರೆ ಆಕೆಯನ್ನು ಈ ರೀತಿ ಮಾಡುವಂತೆ ಪಕ್ಷ ಹೇಳಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆ ಬಿಜೆಪಿ ಪರ ಪ್ರಚಾರ ಮಾಡಿರಬಹುದು. ಈ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪ್ರಶ್ನೆ ಇಲ್ಲ. ಇಲ್ಲಿ ಯಾರು ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಹೇಳಿದ್ದೇವೆ. ಸಿಎಂ ಪ್ರತಿದಿನ ವರದಿ ತರಿಸಿಕೊಳ್ಳುತ್ತಿದ್ದಾರೆ. ಎಷ್ಟೇ ಪ್ರಭಾವಿಗಳಿದ್ದರೂ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸೋಮಶೇಖರ್ ಪ್ರತಿಕ್ರಿಯಿಸಿ, ಡ್ರಗ್ಸ್ ಹಣದಲ್ಲಿ ಸರ್ಕಾರ ಬೀಳಿಸುವ ಸ್ಥಿತಿ ಬಿಜೆಪಿಗೆ ಬಂದಿಲ್ಲ. ಕುಮಾರಸ್ವಾಮಿ ಈಗ ಮಾಡುತ್ತಿರುವ ಆರೋಪಕ್ಕೆ ಸತ್ಯಕ್ಕೆ ದೂರವಾಗಿದ್ದು. ಆಗ ಅವರೇ ಅಧಿಕಾರದಲ್ಲಿದ್ದರು ಇದನ್ನು ಮಟ್ಟ ಹಾಕಬಹುದಾಗಿತ್ತು. ಆಗ ಸುಮ್ಮನೆ ಇದ್ದು ಈಗ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.








