ಬೆಂಗಳೂರು: ಚಿರಂಜೀವಿ ಸರ್ಜಾ ಬಗ್ಗೆ ಪರೋಕ್ಷ ಹೇಳಿಕೆ ನೀಡಿ ವಿವಾದದ ಕೇಂದ್ರ ಬಿಂದುವಾಗಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಚಿರು ಕುಟುಂಬವನ್ನು ಬಹಿರಂಗವಾಗಿ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಇಂದ್ರಜಿತ್ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ವಾಣಿಜ್ಯ ಮಂಡಳಿ ಕಚೇರಿಗೆ ಆಗಮಿಸಿದ ಇಂದ್ರಜಿತ್ ಲಂಕೇಶ್, ಮಂಡಳಿಯ ಸದಸ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ನನ್ನಿಂದ ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈಗಾಗಲೇ ನನ್ನ ಹೇಳಿಕೆಯನ್ನು ನಾನು ವಾಪಸ್ ಪಡೆದಿದ್ದೇನೆ. ಚಿರು ನನ್ನ ಆತ್ಮೀಯ ಸ್ನೇಹಿತ ಮತ್ತು ತಮ್ಮ ಇದ್ದಂತೆ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಎಲ್ಲರ ಮುಂದೆ ಬಹಿರಂಗ ಕ್ಷಮೆ ಕೇಳುತ್ತೇನೆ ಎಂದರು.
ಮೇಘನಾ ರಾಜ್ ಪತ್ರ ಬರೆದು ನೋವು ವ್ಯಕ್ತಪಡಿಸಿದ್ದಾರೆ. ಅವರ ತಂದೆ ತಾಯಿ ನನ್ನನ್ನ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ನನಗೆ ಗೆಳೆಯನಂತೆ. ಅವರ ಆಕಸ್ಮಿಕ ಸಾವು ನನಗೂ ನೋವು ತಂದಿತ್ತು. ಆ ನೋವಿನಲ್ಲೇ ಅವರ ಪೋಸ್ಟ್ ಮಾರ್ಟಂ ಮಾಡಬಹುದಿತ್ತು ಎಂದು ಅಂತ ಹೇಳಿದ್ದೆ. ಆ ಮಾತು ಅವರಿಗೆ ನೋವಾಗಿದೆ. ಈಗ ಎಲ್ಲರ ಮುಂದೆ ಕ್ಷಮೆ ಕೇಳುತ್ತೇನೆ, ಕ್ಷಮೆ ಕೇಳುವುದರಿಂದ ಯರೂ ಚಿಕ್ಕವರಾಗುವುದಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ನಾನು ಚಿರಂಜೀವಿ ಸರ್ಜಾಗೂ ಡ್ರಗ್ ಮಾಫಿಯಾಗೂ ಲಿಂಕ್ ಮಾಡಿ ಮಾತನಾಡಲಿಲ್ಲ. ಪೋಸ್ಟ್ ಮಾರ್ಟಂ ಆಗಬೇಕಿತ್ತು ಅಂತ ಹೇಳಿದ್ದೆ. ಆ ಮಾತನ್ನು ನಾನೀಗ ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಫಿಲ್ಮ್ ಛೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು, ಚಿತ್ರರಂಗದ ಕೊಳೆಯನ್ನು ತೊಳೆಯುವ ಕೆಲಸ ಮಾಡಿದ್ದಕ್ಕೆ ಇಂದ್ರಜಿತ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಇಂದ್ರಜಿತ್ ಮಾತುಗಳಿಂದ ನನಗೆ ಮಾನಸಿಕವಾಗಿ ಆಘಾತವಾಗಿದೆ. ಗರ್ಭಿಣಿಯಾಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅಗ್ರಹಿಸಿದ್ದರು.