ಇಸ್ಲಾಮಾಬಾದ್, ಸೆಪ್ಟೆಂಬರ್ 06: ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಮೆಚ್ಚುಗೆಗೆ ಪಾತ್ರವಾಗಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಸಮುದ್ರವನ್ನು ಚೀನಾಕ್ಕೆ ಸಮರ್ಪಿಸಿದ್ದಾರೆ. ಈ ಸಮುದ್ರ ಒಪ್ಪಂದವು ಪಾಕಿಸ್ತಾನಿಗಳಿಗೆ ಭಯದ ವಾತಾವರಣವನ್ನು ನಿರ್ಮಿಸಿದೆ. ಪಾಕಿಸ್ತಾನವು ತನ್ನ ಕರಾವಳಿ ಭಾಗದಲ್ಲಿ ಮೀನು ಹಿಡಿಯಲು ಚೀನಾದ ಹಡಗುಗಳಿಗೆ ಅವಕಾಶ ನೀಡಿದ್ದು ಇದೀಗ ಸಾವಿರಾರು ಪಾಕ್ ಮೀನುಗಾರರನ್ನು ಅತಂತ್ರದ ಬದುಕಿಗೆ ನೂಕಿದೆ.
ಈ ಒಪ್ಪಂದದ ನಂತರ, ಸಾವಿರಾರು ಮೀನುಗಾರರು ಪಾಕಿಸ್ತಾನದಲ್ಲಿ ಬೀದಿಗಿಳಿದು ಇಮ್ರಾನ್ ಖಾನ್ ಮತ್ತು ಕ್ಸಿ ಜಿನ್ಪಿಂಗ್ ವಿರುದ್ಧ ಪ್ರತಿಭಟಿಸುತ್ತಿದ್ದು ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಉತ್ತುಂಗಕ್ಕೇರಿದೆ. ಜನರು ಕರಾಚಿಯ ಬೀದಿಗಳಲ್ಲಿ ಬಂಡಾಯ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಾಕಿಸ್ತಾನ ತುಂಬಾ ಚೀನಾದ ಅಧಿಪತ್ಯ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದು ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಪಾಕಿಸ್ತಾನ ಚೀನಾ ಪ್ರಜೆಗಳಿಂದ ತುಂಬಿದರೂ ಅಚ್ಚರಿ ಇಲ್ಲ .
ಪಾಕಿಸ್ತಾನದ ಬಯಲು , ಮರುಭೂಮಿ ಪ್ರದೇಶವನ್ನು ಚೀನಾಕ್ಕೆ ಮಾರಿರುವ ಇಮ್ರಾನ್ ಖಾನ್ ಇದೀಗ ದೇಶದ ಸಮುದ್ರವನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ ಎಂದು ಪಾಕಿಸ್ತಾನದ ನಾಗರಿಕರು ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಪಾಕಿಸ್ತಾನದ ಮೀನುಗಾರರ ಜೀವನೋಪಾಯವನ್ನು ಚೀನಿ ವ್ಯಾಮೋಹದಿಂದಾಗಿ ಕಸಿದುಕೊಂಡಿದ್ದಾರೆ.
ಚೀನಾದ ಮೀನುಗಾರಿಕಾ ತಂತ್ರ ಭಾರತದ ಕರಾವಳಿಯ ಕಾವಲು ಪಡೆಯ ಮೇಲೆ ಹದ್ದಿನ ಕಣ್ಣಿಡುವ ರಣ ತಂತ್ರ ಎಂದರೂ ತಪ್ಪಲ್ಲ. ಏನೇ ಇರಲಿ ಕುತಂತ್ರಿ ಚೀನಾ ಪಾಕಿಸ್ತಾನದ ಬಡತನವನ್ನು ಬಂಡವಾಳವಾಗಿ ರೂಪಿಸಿ ಭಾರತದ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಸುಳ್ಳಲ್ಲ