ಬೆಂಗಳೂರು: ನಟಿ ಸಂಜನಾ ಜತೆ ಕಳೆದ ವರ್ಷ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದರು ಎಂದು ಹೇಳಿ ಪ್ರಶಾಂತ್ ಸಂಬರಗಿ ವಿಡಿಯೋ ಬಿಡುಗಡೆ ಮಾಡಿದ್ದರು.
ಪ್ರಶಾಂತ್ ಸಂಬರಗಿ ಆರೋಪಕ್ಕೆ ಪ್ರತಿಕ್ರಿಯಿಸಲು ಶಾಸಕ ಜಮೀರ್ ಅಹಮದ್ ಖಾನ್ ನಿರಾಕರಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಲು ಹಿಂದೇಟು ಹಾಕಿದ ಜಮೀರ್ ಅಹಮದ್, ಥ್ಯಾಂಕ್ಯೂ ಎಂದಷ್ಟೇ ಹೇಳಿ ಕಾರು ಹತ್ತಿ ತೆರಳಿದ್ದಾರೆ.
ಮತ್ತೊಂದೆಡೆ, ನಟಿ ಸಂಜನಾ ನಿಮಗೆ ಪರಿಚಯವೇ, ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಎಂದು ನಿಮ್ಮನ್ನು ಕೇಳಿದ್ದಾರಲ್ಲಾ ಎಂಬ ಪ್ರಶ್ನೆಗೂ ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ, ಉತ್ತರವನ್ನೂ ಕೊಡಲ್ಲ…ಥ್ಯಾಂಕ್ಯೂ..ಥ್ಯಾಂಕ್ಯೂ ಎಂದು ಹೇಳಿ ಜಾರಿಕೊಂಡಿದ್ದಾರೆ.
ಜಮೀರ್ ವಿರುದ್ಧ ಏನು ಎವಿಡೆನ್ಸ್ ಇದೆ: ಸಿದ್ದು
ಸಂಜನಾ ಜತೆ ಶ್ರೀಲಂಕಾಕ್ಕೆ ಜಮೀರ್ ಹೋಗಿದ್ದರು ಎಂಬ ಪ್ರಶಾಂತ್ ಸಂಬರಗಿ ಆರೋಪಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜಮೀರ್ ವಿರುದ್ಧ ಮಾತನಾಡುವವರ ಬಳಿ ಏನು ಎವಿಡೆನ್ಸ್ ಇದೆ ? ಆರೋಪ ಮಾಡಬೇಕಾದ್ರೆ ಏನಾದ್ರೂ ಸಾಕ್ಷಿ ತೋರಿಸಬೇಕಲ್ಲ. ಕಾನೂನು ಉಲ್ಲಂಘನೆ ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ. ತನಿಖೆ ಮಾಡುತ್ತಿರುವುದು ನಾವಲ್ಲ, ಪೊಲೀಸರು. ತನಿಖೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡ್ತಾರೆ ಬಿಡಿ ಎಂದು ಸಿದ್ದರಾಮಯ್ಯ ಜಮೀರ್ ಅಹಮದ್ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಆರೋಪಿಗಳನ್ನು ಬಿಡಿಸಲು ಕೆಲ ಸಚಿವರು ಸಿಸಿಬಿ ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆಂಬ ಗೃಹ ಸಚಿವ ಬೊಮ್ಮಾಯಿ, ಸಿ.ಟಿ ರವಿ ಹೇಳಿಕೆಗೆ, ಯಾರೇ ತಪ್ಪು ಮಾಡಿದ್ರೂ ತಪ್ಪೇ. ಅದರ ಮಾಹಿತಿಯನ್ನು ನಾವೂ ಸಂಗ್ರಹಿಸುತ್ತೇವೆ. ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.