ಮುಂಬೈ, ಸೆಪ್ಟೆಂಬರ್ 8: ನಟಿ ಕಂಗನಾ ಮತ್ತು ಶಿವಸೇನೆ ನಡುವೆ ಕಿತ್ತಾಟ ಮುಂದುವರಿದಿದೆ. ಬಿಎಂಸಿ ಅಧಿಕಾರಿಗಳು ಬಾಂದ್ರಾದಲ್ಲಿರುವ ಕಂಗನಾ ರಾಣಾವತ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದು, ಮುಂಬೈಗೆ ಕಂಗನಾ ಆಗಮಿಸುತ್ತಿದ್ದಂತೆ ಅವರನ್ನು ಕ್ವಾರಂಟೀನ್ ಗೆ ಕಳುಹಿಸಲಾಗುವುದು ಎಂದು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಹೇಳಿದೆ.
ನಿಗಮದ ಅಧಿಕಾರಿಗಳು ನನ್ನ ಕಚೇರಿ ಮೇಲೆ ದಾಳಿ ನಡೆಸಿದ್ದು, ನಾಳೆ ನನ್ನ ಕಚೇರಿಯನ್ನು ನೆಲಸಮ ಮಾಡಲಿದ್ದಾರೆ ಎಂದು ಆರೋಪಿಸಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತನ್ನ ಕಚೇರಿ ಆವರಣದ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
15 ವರ್ಷಗಳ ಕಠಿಣ ಪರಿಶ್ರಮದಿಂದ ತಾನು ಈ ಕಚೇರಿಯನ್ನು ನಿರ್ಮಿಸಿದ್ದೇನೆ ಮತ್ತು ಯಾವಾಗಲೂ ತನ್ನದೇ ಆದ ಕಚೇರಿಯನ್ನು ಹೊಂದಬೇಕೆಂದು ಕನಸು ಕಂಡಿದ್ದೆ. ಆದರೆ ನನ್ನ ಆ ಕನಸು ಕೊನೆಗೊಳ್ಳುತ್ತದೆ ಎಂದು ತೋರುತ್ತಿದೆ. ಅವರು ನನ್ನ ಕಚೇರಿಯ ಮೇಲೆ ದಾಳಿ ನಡೆಸಿ ಎಲ್ಲವನ್ನೂ ಧ್ವಂಸಗೊಳಿಸಲಿದ್ದಾರೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಕಚೇರಿಗೆ ಸಂಬಂಧಿಸಿದಂತೆ ಎಲ್ಲಾ ಕಾಗದ ಪತ್ರಗಳನ್ನು ಕಾನೂನು ಪ್ರಕಾರ ಹೊಂದಿದ್ದು, ಯಾವುದೇ ಆಸ್ತಿಯನ್ನು ಕಾನೂನುಬಾಹಿರವಾಗಿ ಮಾಡಿಲ್ಲ ಎಂದು ನಟಿ ಕಂಗನಾ ಪ್ರತಿಪಾದಿಸಿದ್ದಾರೆ. ಬಿಎಂಸಿ ಅಕ್ರಮ ನಿರ್ಮಾಣವನ್ನು ತೋರಿಸಲು ನೋಟಿಸ್ ನೊಂದಿಗೆ ರಚನಾ ಯೋಜನೆಯನ್ನು ಕಳುಹಿಸಬೇಕು, ಇಂದು ಅವರು ನನ್ನ ಕಚೇರಿ ಮೇಲೆ ದಾಳಿ ನಡೆಸಿದರು ಮತ್ತು ನಾಳೆ ಯಾವುದೇ ಸೂಚನೆ ಇಲ್ಲದೆ ಸಂಪೂರ್ಣ ಕಟ್ಟಡವನ್ನು ಕೆಡವಲಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಶಿವಸೇನೆ ಬಿಎಂಸಿಯಲ್ಲಿ ಬಹುಮತ ಹೊಂದಿದ ಪಕ್ಷವಾಗಿದೆ.
ಬಾಲಿವುಡ್ ನಟಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಎಂದು ಕರೆದ ನಂತರ ಕಂಗನಾ ಮತ್ತು ಶಿವಸೇನೆ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಶಿವಸೇನೆಯ ಸಂಜಯ್ ರಾವತ್ ಕಂಗನಾರನ್ನು ‘ಹರಮ್‌ಖೋರ್’ ಹುಡುಗಿ ಎಂದು ಕರೆದರೆ ಇತರ ಶಿವಸೇನೆ ಮುಖಂಡರು ಆಕೆಗೆ ಸುರಕ್ಷಿತ ಭಾವನೆ ಇಲ್ಲದಿದ್ದರೆ ಮುಂಬೈಗೆ ಹಿಂತಿರುಗಬಾರದೆಂದು ಎಚ್ಚರಿಕೆ ನೀಡಿದ್ದಾರೆ.
ಬಿಎಂಸಿ ಅಧಿಕಾರಿಗಳು ಅವರ ಕಚೇರಿಯ ಮೇಲೆ ದಾಳಿ ನಡೆಸಿದ ಕೆಲವು ಗಂಟೆಗಳ ಬಳಿಕ ಕಂಗನಾ ಪ್ರಾಣಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಅವರಿಗೆ ವೈ ದರ್ಜೆಯ ಭದ್ರತಾ ರಕ್ಷಣೆಯನ್ನು ನೀಡಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಬೆಂಬಲಿಗರಿಗೆ ಭದ್ರತೆ ಒದಗಿಸುತ್ತದೆ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಕಂಗನಾರಿಗೆ ನೀಡಿರುವ ವೈ ದರ್ಜೆಯ ಭದ್ರತಾ ನಿರ್ಧಾರವನ್ನು ಟೀಕಿಸಿದೆ.