ಇಂದಿನಿಂದ ಆರಂಭವಾಗುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಮಿಂಚಲು ಭಾರತದ ಬ್ಯಾಡ್ಮಿಂಟನ್ ತಾರೆಯರು ಸಜ್ಜಾಗಿದ್ದಾರೆ. ವರ್ಷದ ಮೊದಲ ಸೂಪರ್ 1000 ಟೂರ್ನಿ ಇದಾಗಿದ್ದು, ಒಲಿಂಪಿಕ್ಸ್ ಸಿದ್ಧತೆ ದೃಷ್ಟಿಯಿಂದ ಭಾರಿ ಮಹತ್ವ ಪಡೆದಿದೆ. ಕರೊನಾ ಭೀತಿಯಿಂದಾಗಿ ಈಗಾಗಲೇ ಹಲವು ಪ್ರತಿಷ್ಠಿತ ಟೂರ್ನಿಗಳು ರದ್ದುಗೊಂಡಿವೆ. ಇದರ ನಡುವೆಯೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ.
ಟೋಕಿಯೊ ಒಲಿಂಪಿಕ್ಸ್ ಗೆ ಬಹುತೇಕ ಅರ್ಹತೆ ಗಿಟ್ಟಿಸಿಕೊಂಡಿರುವ ವಿಶ್ವ ನಂ.6 ಪಿವಿ ಸಿಂಧು, 2 ದಶಕಗಳಿಂದ ಭಾರತೀಯ ಪಾಲಿಗೆ ಗಗನ ಕುಸುಮವಾಗಿರುವ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಜಯಿಸುವ ಉತ್ಸಾಹದಲ್ಲಿದ್ದಾರೆ. ಪಿವಿ ಸಿಂಧು ಜತೆಗೆ ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ಕಣದಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಲು ಏಪ್ರಿಲ್28 ರೊಳಗೆ ಅಗ್ರ 16 ರೊಳಗೆ ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ. ಜತೆಗೆ ಒಲಿಂಪಿಕ್ಸ್ ಗೆ ಅರ್ಹತೆ ಸಂಪಾದಿಸುವ ಅವಕಾಶವೂ ಹೆಚ್ಚಿರುತ್ತದೆ. ಅರೆನಾ ಬಂಗ್ ಹ್ಯಾಂನಲ್ಲಿ ಅಗ್ರ ಶ್ರೇಯಾಂಕಿತ ಷಟ್ಲರ್ ಗಳು ಕಣಕ್ಕಿಳಿಯಲಿದ್ದಾರೆ. 2001ರಲ್ಲಿ ಪಿ.ಗೋಪಿಚಂದ್ ಕಡೇ ಬಾರಿಗೆ ಭಾರತದ ಪರ ಈ ಪ್ರತಿಷ್ಠಿತ ಟೂರ್ನಿ ಜಯಿಸಿದ್ದರು.