ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಂತೆಯೇ ಇಂದು ರಾತ್ರಿ ಕೂಡ ವರುಣ ಅಬ್ಬರ ಜೋರಾಗಿದೆ. ಬೆಂಗಳೂರು ಉತ್ತರ ಹಾಗೂ ಪೂರ್ವ ಭಾಗದಲ್ಲಿ ಮತ್ತೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಮಳೆ ಇನ್ನೂ ಮುಂದುವರೆದಿದೆ.

ಹೊರಮಾವು, ಅಗರ, ಕೆ.ಆರ್ ಪುರಂ, ಚಿಕ್ಕಬಾಣಾವರ, ಹೆಚ್‍ಎಸ್‍ಆರ್ ಲೇಔಟ್ ಸೇರಿದಂತೆ ನಿನ್ನೆ ಜಲಾವೃತಗೊಂಡಿದ್ದ ಪ್ರದೇಶಗಳು ಮತ್ತೆ ನೀರಿನಲ್ಲಿ ಮುಳುಗಿ ಹೋಗಿವೆ.
ಚಿಕ್ಕಬಾಣಾವರದ ಬೃಂದಾವನ ಬಡಾವಣೆಗೆ ಮತ್ತೆ ನೀರು ನುಗ್ಗಿದ್ದು ಮನೆಗಳು ಜಲಾವೃತಗೊಂಡಿವೆ. ಮಾನ್ಯತಾ ಟೆಕ್‍ಪಾರ್ಕ್‍ಗೂ ನೀರು ನುಗ್ಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ.

ಹೆಬ್ಬಾಳ ಹಾಗೂ ಕೆ.ಆರ್ ಪುರಂ ನಡುವಿನ ರಿಂಗ್ ರೋಡ್‍ನ ಹಲವು ಕಡೆ ನೀರಿನಿಂದ ಜಲಾವೃತಗೊಂಡಿದೆ.
ಹೆಣ್ಣೂರಿನ ಸಾಯಿ ಮಂದಿರ ಮತ್ತೆ ಜಲಾವೃತಗೊಂಡಿದೆ. ಹೊರಮಾವಿನ ದ್ವಾರಕಾನಗರ ಮತ್ತೆ ಮುಳುಗಡೆಯಾಗಿದೆ. ಬಸವೇಶ್ವರ ನಗರ ಬಳಿ ಮರ ರಸ್ತೆಗೆ ಮರ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ಶಂಕರಮಠದ ಪುಷ್ಪಾಂಜಲಿ ಥಿಯೇಟರ್ ಸರ್ಕಲ್ ಕೆರೆಯಂತಾಗಿದ್ದು, ಪೆಟ್ರೋಲ್ ಬಂಕ್‍ಗೆ ನೀರು ನುಗ್ಗಿದೆ.

ತುಮಕೂರು ರಸ್ತೆಯ ಫೈಓವರ್‍ನಲ್ಲಿ ಮಳೆಯಿಂದಾಗಿ ಆದ ಅಪಘಾತದಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಜನ ಇಡಿ ರಾತ್ರಿ ಜಾಗರಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.








