ಬೆಂಗಳೂರು: ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿಸಿದ ಮಾಸ್ಟರ್ ಮೈಂಡ್ ಹಾಗೂ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಳೆದ ತಿಂಗಳು ಡಿ.ಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ವೇಳೆ ಕಾವಲ್ ಬೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಲು ಕುಮ್ಮಮ್ಮು ನೀಡಿದ್ದ ಆರೋಪಿ ಮುಜಾಯಿದ್‍ನನ್ನು ಬಂಧಿಸಲಾಗಿದೆ.
ಡಿ.ಜೆ ಹಳ್ಳಿ. ಕೆ.ಜಿ ಹಳ್ಳಿ ಗಲಭೆ ನಂತರ ಮುಜಾಯಿದ್ ಚಾಮರಾಜಪೇಟೆಯ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿದ್ದ. ಈತ ಅಲ್ಲಿ ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಜಾಯಿದ್ ಆಕಾ ಅಲಿಯಾಸ್ ವಾಟರ್ ಮುಜ್ಜು, ವಾಟರ್‍ಮನ್ ಆಗಿ ಕೆಲಸ ಮಾಡುತ್ತಿದ್ದ. ಗಲಭೆಯ ದಿನ ನೂರಾರು ಜನರನ್ನು ಸೇರಿಸಿ ಶಾಸಕರ ವಿರುದ್ಧ ಪ್ರಚೋದನೆ ಮಾಡಿದ್ದಲ್ಲದೆ, ಅವರ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ್ದ.

ಗಲಭೆ ನಂತರ ಖುದ್ದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರೇ ಮುಜಾಯಿದ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಗಲಾಟೆ ಬಳಿಕ ರಾಮನಗರ, ಕೋಲಾರ, ಮುಳಬಾಗಿಲು ಸೇರಿದಂತೆ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ. ಇತ್ತೀಚೆಗೆ ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸಲ್ಲಿ ಸಿಸಿಬಿ ಪೊಲೀಸರು ಬ್ಯುಸಿಯಾಗಿದ್ದಾರೆಂದು ಭಾವಿಸಿ ಚಾಮರಾಜಪೇಟೆಗೆ ಬಂದು ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಎನ್ನಲಾಗಿದೆ.








