ಮೈಸೂರು : ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಜಿಲ್ಲೆಯ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸಿಗುತ್ತದೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದ್ರೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್ ಗಳ ಮೇಲೆ ದಾಳಿ ಮಾಡಿ. ಹಾಸ್ಟೆಲ್ ಗಳನ್ನು ಚೆಕ್ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದು ಸವಾಲೆಸೆದರು.
ಲವ್ ಜಿಹಾದ್ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ. ಪಂಜಾಬ್, ಗುಜರಾತ್, ಗೋವಾ ಮೂಲಕ ಡ್ರಗ್ಸ್ ದೇಶಕ್ಕೆ ಪ್ರವೇಶಿಸುತ್ತಿದೆ. ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದರು.








