ರಾಜ್ಯ ಕಾಂಗ್ರೆಸ್ ನಲ್ಲಿ ಇನ್ಮುಂದೆ ಹೆಬ್ಬುಲಿ ಘರ್ಜಿಸಲಿದೆ. ಡಿಕೆ ಸಾಹೇಬನಿಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ನೀಡಿರುವುದು ಪಕ್ಷದ ಕಾರ್ಯಕರ್ತರಿಗೆ ಆನೆ ಬಲ ನೀಡಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರ ನೇಮಕಾತಿ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಜ್ಯೇಷ್ಠ ಪುತ್ರನಾಗಿ 1962 ಮೇ 15ರಂದು ಜನಿಸಿದ ಡಿ.ಕೆ.ಶಿವಕುಮಾರ್ ಅವರು 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗದ ಎನ್ಎಸ್ಯುಐಗೆ ಸೇರ್ಪಡೆಯಾದರು.
ಸ್ವಲ್ಪ ಕಾಲದಲ್ಲೇ ಜಿಲ್ಲಾ ಘಟಕದ ಅಧ್ಯಕ್ಷರೂ ಆದರು. ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಡಿ.ಕೆ.ಶಿವಕುಮಾರ್ ಆರ್ಸಿ ಕಾಲೇಜಿನಲ್ಲಿ ಓದುವಾಗಲೇ ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು.
ದೊಡ್ಡಗೌಡರಿಗೆ ಸವಾಲ್, ಸಾತನೂರಿನಲ್ಲಿ ಡಿಕೆಶಿ ಹವಾ
ಕಾಂಗ್ರೆಸ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಡಿ.ಕೆ ಶಿವಕುಮಾರ್ ಮೊದಲ ಬಾರಿಗೆ 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಅಂದಿನ ಪ್ರಭಾವಿ ಜನಾತದಳದ ಮುಖಂಡರಾದ ಎಚ್.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಪರ್ಧಿಸಿದ್ದರು. ಆದ್ರೆ ಈ ಚುನಾವಣೆಯಲ್ಲಿ ಗೆಲ್ಲುವಲ್ಲಿ ಡಿಕೆಶಿ ವಿಫಲರಾದರು. ಡಿಕೆ ಶಿವಕುಮಾರ ಸಾತನೂರಿನಲ್ಲಿ ಮೊದಲ ಬಾರಿ ಸೋತ ಬಳಿಕ ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಸದಾ ಕ್ಷೇತ್ರದ ಜನರ ಜೊತೆ ಸಂಪರ್ಕವನ್ನು ಇಟ್ಟುಕೊಂಡು. ಅಲ್ಲಿಯ ಜನರ ಕಷ್ಟ ನಷ್ಟಗಳ ಜೊತೆ ಹೆಜ್ಜೆ ಹಾಕಿದ್ದರು. ಇದರ ಪ್ರತಿಫಲವೇ 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದರು. ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಮರೆಯಾದಾಗ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಸತತವಾಗಿ ವಿಧಾನಸಭೆ ಪ್ರವೇಶಿಸುತ್ತಲೆ ಬಂದಿದ್ದಾರೆ. 1999ರಲ್ಲಿ ಎಸ್. ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದಾಗ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಶ್ಯಾಡೋ ಸಿಎಂ ಎಂದೇ ಪ್ರಚಲಿತವಿತ್ತು.
2004ರಲ್ಲಿ ರಾಜ್ಯದಲ್ಲಿ ಧರ್ಮಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಡಿ.ಕೆ. ಶಿವಕುಮಾರ್ ಸೇರ್ಪಡೆಗೆ ದೇವೇಗೌಡರಿಂದ ಪ್ರಬಲ ವಿರೋಧ ವ್ಯಕ್ತವಾಯಿತು. ಹಾಗಾಗಿ ಸಚಿವ ಸ್ಥಾನ ತಪ್ಪಿಸಿಕೊಂಡ ಡಿಕೆಶಿ ಸುಮಾರು 10 ವರ್ಷಗಳ ಕಾಲ ಅಧಿಕಾರದಿಂದ ದೂರವೇ ಉಳಿಯಬೇಕಾಯ್ತು. ಆರ್.ವಿ. ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾರ್ಯಾಧ್ಯಕ್ಷರಾಗಿದ್ದ ಡಿಕೆಶಿ, ಅಲ್ಲಿಂದಲೇ ಕೆಪಿಸಿಸಿ ಗದ್ದುಗೆ ಮೇಲೆ ಕಣ್ಣಿಟ್ಟಿದ್ದರು. ಅದಕ್ಕಾಗಿ ಹಲವು ಸುತ್ತಿನ ಪ್ರಯತ್ನಗಳನ್ನೂ ನಡೆಸಿದ್ದರು. ಬದಲಾದ ಕಾಲಘಟ್ಟದಲ್ಲಿ ಡಿಕೆಶಿ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೆ ಗುರುತಿಸಿಕೊಂಡರು. ಅಲ್ಲದೆ ಹೈಕಮಾಂಡ್ ಪಾಲಿನ ಆಪತ್ಬಾಂಧನಾಗಿ ಕಾರ್ಯನಿರ್ವಹಿಸಿದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗ ಪ್ರಾರಂಭದಲ್ಲಿ ಸಂಪುಟ ಸೇರ್ಪಡೆಗೆ ಅವಕಾಶವಿರಲ್ಲಿ. ಆರು ತಿಂಗಳ ಬಳಿಕ ಹೈಕಮಾಂಡ್ ಆದೇಶದ ಮೇಲೆ ಶಿವಕುಮಾರ್ ಸಚಿವ ಸಂಪುಟಕ್ಕೆ ಸೇರಿಕೊಂಡರು. ಈ ಸಮಯದಲ್ಲಿ ತಮ್ಮ ತಂದೆಯ ಶವ ಸಂಸ್ಕಾರ ನೆರವೇರಿಸಿ ರಾಜಭವನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ಡಿ.ಕೆ ಶಿವಕುಮಾರ ಕಾಂಗ್ರೆಸ್ ಹೈಕಮಾಂಡ್ ಗೆ ತೋರಿದ ನಿಷ್ಠತನ ಎಐಸಿಸಿಗೆ ಹತ್ತಿರವಾಗುವಂತೆ ಮಾಡಿತ್ತು. ಅಲ್ಲದೆ ಎಸ್. ಎಂ. ಕೃಷ್ಣ ನಂತರದ ಕಾಂಗ್ರೆಸ್ ನಲ್ಲಿನ ಒಕ್ಕಲಿಗ ನಾಯಕನಾಗಿ ಡಿ.ಕೆ. ಶಿವಕುಮಾರ್ ಗುರುತಿಸಿಕೊಂಡಿದ್ದರು. ಹಾಗಾಗಿ ಡಿಕೆಶಿ ಎಸ್.ಎಮ್ ಕೃಷ್ಣ ಅವರನ್ನು ತಮ್ಮ ರಾಜಕೀಯ ಗುರು ಎಂದು ಪರಿಗಣಿಸಿದ್ದಾರೆ. ಇದರಿಂದಾಗಿ ಡಿಕೆಶಿ ರಾಜಕೀಯ ಜೀವನದ ಮೈಲುಗಲು ಸ್ಥಾಪಿಸಬೇಕಾದರೆ ತಮ್ಮ ರಾಜಕೀಯ ಗುರುಗಳನ್ನು ಭೇಟಿ ಮಾರ್ಗದರ್ಶನ ಪಡೆಯುವ ಪರಿಪಾಠವಿದೆ.
ಅದರಲ್ಲೂ 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಪಾಂಚಜನ್ಯ ಯಾತ್ರೆಗೆ ಡಿ.ಕೆ.ಶಿವಕುಮಾರ್ ಬೆನ್ನೆಲುಬಾಗಿ ನಿಂತಿದ್ದರು. ಅದರಿಂದಾಗಿ ಕಾಂಗ್ರೆಸ್ 139 ಸ್ಥಾನ ಗೆದ್ದಿತ್ತು. ಯುವ ನಾಯಕರೆಂದೇ ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್ ಹಿರಿಯರಿಂದ ಕಿರಿಯರವರೆಗೂ ಎಲ್ಲರನ್ನು ಮತ್ತು ಎಲ್ಲ ಜಾತಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವುದರಲ್ಲಿ ಮೊದಲಿನಿಂದಲೂ ಎತ್ತಿದ ಕೈ .
ಈಗ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆಯಾಗಿರುವುದು ಕಾಂಗೆಸ್ನಲ್ಲಿ ಹೊಸ ಹುರುಪನ್ನು ಮೂಡಿಸಿದೆ.








