ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ತನಿಖೆ ದಿಕ್ಕನ್ನು ನೋಡಿದರೆ ರಾಜ್ಯ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತ ಕೊರೊನಾ ಹಾವಳಿ ಹಾಗೂ ಪ್ರವಾಹ ಪರಿಹಾರದ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶವೇ ಮುಖ್ಯವಾಗಿದೆ ಎಂಬಂತೆ ಕಾಣುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಸರಣಿ ಟ್ವೀಟ್‍ಗಳ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.

ಡಿ.ಜೆ ಹಳ್ಳಿ ಗಲಭೆ ಬಗ್ಗೆ ನಿಮ್ಮದೇ ತನಿಖೆಯ ಪ್ರಹಸನ ಮಾಡಿ ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಿದ್ದೀರಿ. ಈಗ ಡ್ರಗ್ಸ್ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡಿ ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ ? ಗೃಹ ಸಚಿವರ ಮೇಲೋ ಎಂದು ಮತ್ತೊಂದು ಟ್ವೀಟ್‍ನಲ್ಲಿ ಕುಟುಕಿದ್ದಾರೆ.

ಪ್ರತಿ ಬಾರಿಯೂ ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್ ಹಗರಣದಲ್ಲಿ ಕೂಡಾ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು. ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಆರೋಪಿಗಳ ಜತೆಗಿನ ರಾಜಕಾರಣಿಗಳ ಫೋಟೋ ಹಾಕಿ ಅವರ ಹೆಸರನ್ನು ಹಗರಣದ ಜತೆ ಜೋಡಿಸುವುದು ಕೆಟ್ಟ ಚಾಳಿ. ಸಭೆ ಸಮಾರಂಭಗಳಲ್ಲಿ ಜೊತೆಗೆ ನಿಂತವರೆಲ್ಲರ ಜಾತಕ ಬಿಡಿಸಿ ನೋಡಲು ಆಗುವುದಿಲ್ಲ. ಆದರೆ ಅಧಿಕೃತ ಸಮಾರಂಭಗಳಿಗೆ ಅಂತಹವರನ್ನು ಆಹ್ವಾನಿಸುವಾಗ, ಚುನಾವಣಾ ಪ್ರಚಾರಗಳಲ್ಲಿ ಬಳಸುವಾಗ ಎಚ್ಚರದಿಂದ ಇರಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.









