ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಶಾಂತ್ ಸಂಬರಗಿಗೆ ನಿನ್ನೆಯೇ ಸಿಸಿಬಿ ಪೊಲೀಸರು ವಿಚಾರಣೆ ಹಾಜರಾಗಿ ನಿಮ್ಮ ಬಳಿ ಇರುವ ದಾಖಲೆ ಜೊತೆಗೆ ಹೇಳಿಕೆ ನೀಡುವಂತೆ ನೋಟಿಸ್ ನೀಡಿದ್ದರು.
ನೋಟಿಸ್ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿಚಾರಣೆಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ.
ಈ ನಡುವೆ, ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್ ನೀಡಿದ ವಿಚಾರ ಗೊತ್ತಾಗುತ್ತಿದ್ದಂತೆ ನಟಿ ಸಂಜನಾ ಗಲ್ರಾನಿ ಫುಲ್ ಟೆನ್ಶನ್‍ಗೆ ಒಳಗಾಗಿದ್ದಾರಂತೆ. ಕಳೆದ ರಾತ್ರಿಯಿಂದ ತುಂಬಾ ಟೆನ್ಶನ್ ಮಾಡಿಕೊಂಡಿರುವ ಸಂಜನಾ, ಯಾರೊಂದಿಗೂ ಮಾತನಾಡದೇ ಮೌನವಾಗಿಯೇ ಕುಳಿತಿದ್ದಾರಂತೆ.
ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ಸಂಜನಾ ಗಲ್ರಾನಿ, ರಾತ್ರಿ ನಿದ್ರೆ ಮಾಡದೇ ಅತ್ತಿಂದಿತ್ತ ಓಡಾಡುತ್ತಾ ಇಡೀ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ.
ಶ್ರೀಲಂಕಾದ ಕ್ಯಾಸಿನೋ ಒಂದರಲ್ಲಿ ಶಾಸಕ ಜಮೀರ್ ಅಹಮದ್ ಹಾಗೂ ಸಂಜನಾ ಗಲ್ರಾನಿ ಹೋಗಿದ್ದರು ಎಂದು ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಸಂಬರಗಿ ಬಿಡುಗಡೆ ಮಾಡಿದ್ದರು. ಇಂದು ಸಂಜನಾಗೆ ಸಂಬಂಧಪಟ್ಟ ವಿಡಿಯೋ ಫೋಟೋಗಳನ್ನು ಸಂಬರಗಿ ಸಿಸಿಬಿಗೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಸಂಬರಗಿ ಏನ್ ದಾಖಲೆ ಕೊಡ್ತಾರೋ ಎಂಬ ಆತಂಕ ಸಂಜನಾಳನ್ನು ಕಾಡುತ್ತಿದೆ ಎನ್ನಲಾಗಿದೆ.








