ಬೆಂಗಳೂರು: ಪ್ರಶಾಂತ್ ಸಂಬರಗಿ ನಾನು ಶ್ರೀಲಂಕಾ ರಾಜಧಾನಿ ಕೊಲಂಬೋಗೆ ಹೋಗಿದ್ದೆ ಎಂದು ಪದೇ ಪದೇ ಹೇಳ್ತಾರೆ. ನಾನು ಕೊಲೊಂಬೋಗೆ ಹೋಗಿದ್ದು ನಿಜ. ಕೊಲಂಬೋಗೆ ಹೋಗೋದು ತಪ್ಪಾ ಎಂದು ಶಾಸಕ ಜಮೀರ್ ಅಹಮದ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, ಕೊಲೊಂಬೋ ಆಗಾಗ ಹೋಗುತ್ತೇನೆ. ಒಂದು ವರ್ಷಕ್ಕೋ ಒಂದೂವರೆ ವರ್ಷಕ್ಕೋ ಹೋಗ್ತಾ ಇರುತ್ತೇನೆ. ಜೆಡಿಎಸ್‍ನಲ್ಲಿದ್ದಾಗ ನಾನು ಕೊಲಂಬೋಗೆ ಹೋಗಿದ್ದೆ. ಕುಮಾರಸ್ವಾಮಿ ಸಹ ಕೊಲಂಬೋಗೆ ಹೋಗಿದ್ರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕುಮಾರಸ್ವಾಮಿ ಹಾಗೂ 28 ಶಾಸಕರ ಜತೆ ನಾನು ಕೊಲೊಂಬೋಗೆ ಹೋಗಿದ್ದೇನೆ. ಕ್ಯಾಸಿನೋಗು ಹೋಗಿದ್ದೇ. ಹಂಗಾದ್ರೆ ನಾವೇನು ಪಾಕಿಸ್ತಾನಕ್ಕೆ ಹೋಗಿದ್ದೇನಾ. ಕ್ಯಾಸಿನೋ ಇಲ್ಲಿಗಲ್ ಅಲ್ಲ, ಲೀಗಲ್ ಎಂದು ಜಮೀರ್ ಅಹಮದ್ ಹೇಳಿದ್ದಾರೆ.
ಭಾರತ ಸರ್ಕಾರ ಕೊಲೊಂಬೋ ಹೋಗೋದು ಬ್ಯಾನ್ ಮಾಡಿದೆಯಾ ? ನಾನು ಒಬ್ಬ ಮಾತ್ರ ಹೋಗಿದ್ದೇನಾ ? ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯವರೇ ಜಾಸ್ತಿ ಹೋಗಿದ್ದಾರೆ ಎಂದು ಹೇಳಿ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ.
ಗಲ್ಲು ಶಿಕ್ಷೆ ಕೊಡಲಿ-ಜಮೀರ್
ನಾನೇನು ನಾನು ಸಂಜನಾ ಜೊತೆ ಕೊಲೊಂಬೋ ಹೋಗಿದ್ದೇನಾ. ಸಂಜನಾ ಜೊತೆ ನಾನು ಹೋಗಿದ್ದು ಸಾಬೀತಾದ್ರೆ ಆಸ್ತಿ ಬರೆದುಕೊಡ್ತೇನೆ ಎಂದು ಪುನರುಚ್ಚರಿಸಿರುವ ಜಮೀರ್ ಅಹಮದ್, ಡ್ರಗ್ಸ್ ಜಾಲದಲ್ಲಿ ನಾನು ಇದ್ದರೆ ನನಗೆ ಗಲ್ಲು ಶಿಕ್ಷೆ ಕೊಡಲಿ. ಡ್ರಗ್ಸ್ ಜಾಲದಲ್ಲಿರುವವರನ್ನು ಪಬ್ಲಿಕ್ ಆಗಿ ಗಲ್ಲಿಗೇರಿಸಲಿ. ಸಾರ್ವಜನಿಕ ಜೀವನದಲ್ಲಿ ಇರುವವರು ಡ್ರಗ್ಸ್ ತಗೊಂಡ್ರೆ ನ್ಯಾಯಾಧೀಶರು ಗಲ್ಲು ಶಿಕ್ಷೆ ಕೊಡಲಿ ಎಂದು ಜಮೀರ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.