ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ತನಿಖೆ ನಡೆಯುತ್ತಿರುವಾಗಲೇ ಶಾಸಕ ಜಮೀರ್ ಅಹಮದ್ ನನ್ನ ಹೆಸರನ್ನು ಎಳೆದು ತಂದಿದ್ದು ಯಾಕೆ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಡ್ರಗ್ಸ್ ಮಾಫಿಯಾ ಬಗ್ಗೆ ಸಮಗ್ರ ತನಿಖೆ ಆಗಲಿ. ಆದರೆ ತನಿಖೆಯ ದಾರಿ ತಪ್ಪಿಸಲು ಜಮೀರ್ ನನ್ನ ಹೆಸರು ಹೇಳಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ಶ್ರೀಲಂಕ್ಕಾಕ್ಕೆ ಒಂದು ಬಾರಿ ಮಾತ್ರ ಹೋಗಿದ್ದೇನೆ. ಆದ್ರೆ ಜಮೀರ್ ತಾವೇ ನನ್ನನ್ನು ಕರೆದುಕೊಂಡು ಹೋಗಿದ್ದಾಗಿ ಹೇಳುತ್ತಿದ್ದಾರೆ. ನಮಗೆ ಕೊಲೊಂಬೋಗೆ ಹೋಗಲು ಬರುವುದಿಲ್ಲವೇ? ಅವರೇಕೆ ನಮ್ಮನ್ನು ಕರೆದುಕೊಂಡು ಹೋಗಬೇಕು. ಇದನ್ನೆಲ್ಲಾ ನೋಡಿದ್ರೆ ನನ್ನ ಹೆಸರು ತಂದು ತನಿಖೆ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2014ಲ್ಲಿ ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಟ್ವಿಟರ್‍ನಲ್ಲಿ ಈ ವಿಚಾರನ್ನು ಹೇಳಿದ್ದೇನೆ. ಪಕ್ಷದ ಸಭೆ ಮಾಡುವ ಸಲುವಾಗಿ ಅಲ್ಲಿಗೆ ಹೋಗಿದ್ದೆವು. ಈಗ ಅದರ ಪ್ರಸ್ತಾಪ ಏಕೆ ಮಾಡುತ್ತಿದ್ದಾರೆ. ನಮ್ಮನ್ನು ಜಮೀರ್ ಕರೆದುಕೊಂಡು ಹೋದಂತೆ ಮಾತನಾಡುತ್ತಿರುವುದೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ
ನೈಟ್ ಬಾರ್‍ಗಳಲ್ಲಿ ಡ್ರಗ್ಸ್ ಬಳಕೆ ಇದೆ: ಹೆಚ್‍ಡಿಕೆ
1982ರಲ್ಲೇ ನಾನು ಕ್ಯಾಸಿನೋ ಹೇಗಿರುತ್ತೆ ಎಂದು ನೋಡಿದ್ದೇನೆ. ಮಲೇಶಿಯಾಗೆ ಪತ್ನಿ ಜತೆ ಹೋಗಿದ್ದಾಗ ಕ್ಯಾಸಿನೋ ನೋಡಿದ್ದೇನೆ. ಬೆಂಗಳೂರಿನ ನೈಟ್ ಬಾರ್‍ಗಳಲ್ಲಿ ಈಗಲೂ ಡ್ರಗ್ಸ್ ದಂಧೆ ನಡೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ನೈಟ್ ಬಾರ್‍ಗಳು ರಂಗಾಗುತ್ತವೆ. ಎಂ.ಜಿ ರಸ್ತೆ ಹಾಗೂ ಮಲ್ಯ ರಸ್ತೆಗಳಲ್ಲಿ ಬೆಳಗಿನ ಜಾವದವರೆಗೂ ನೈಟ್ ಪಾರ್ಟಿಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನೈಟ್ ಬಾರ್‍ಗಳಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಪ್ರಯತ್ನ ಮಾಡಿದ್ದೆ ಆದರೆ, ಈಗ ಹೇಗಿದೆ ಎಂಬುದು ಗೊತ್ತಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸ್ಯಾಂಡಲ್‍ವುಡ್‍ನಲ್ಲಿ ಮಾತ್ರ ಡ್ರಗ್ಸ್ ದಂಧೆ ಇಲ್ಲ, ಎಲ್ಲಾ ಕಡೆಯೂ ಇದರ ಜಾಲ ಇದೆ. ಆದರೆ, ನಾನು ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ಆದರೆ, ನಟ, ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
*************************************









