ಮಾಜಿ ಆರ್ ಜೆಡಿ ನಾಯಕ, ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ನಿಧನ
ಪಾಟ್ನಾ, ಸೆಪ್ಟೆಂಬರ್13: ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಮಾಜಿ ನಾಯಕ, ಕೇಂದ್ರದ ಮಾಜಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರು ಇಂದು ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ 75 ವರ್ಷ ವಯಸ್ಸಿನ ರಘುವಂಶ ಪ್ರಸಾದ್ ಸಿಂಗ್ ಅವರಿಗೆ ದೆಹಲಿಯ ಏಮ್ಸ್ ನಲ್ಲಿ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ನಿಧನರಾದರು.
ಕೊರೊನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಘುವಂಶ್ ಅವರನ್ನು ಪಾಟ್ನಾದಿಂದ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಗೆ ಸೇರಿಸಲಾಗಿತ್ತು. ಬುಧವಾರದಂದು ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ನಿಷ್ಠಾವಂತರಾಗಿದ್ದ ರಘುವಂಶ ಪ್ರಸಾದ್ ಸಿಂಗ್ ಕೆಲವು ದಿನಗಳ ಹಿಂದೆಯಷ್ಟೇ ಆರ್ ಜೆ ಡಿ ಪಕ್ಷದ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ದೆಹಲಿಯ ಏಮ್ಸ್ ಆಸ್ಪತ್ರೆಯಿಂದಲೇ ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಿಂಗ್ ಕಳಿಸಿದ್ದರು. ತೇಜಸ್ವಿ ಯಾದವ್ ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಲು ಸಾಧ್ಯವಿಲ್ಲ ಎಂದು ರಘುವಂಶ್ ಪ್ರಸಾದ್ ಅವರು ಬಹಿರಂಗವಾಗಿ ಪ್ರತಿಭಟಿಸಿದ್ದರು.