ಕೊರೋನವೈರಸ್ ಪೀಡಿತ ಇಟಲಿ ಮತ್ತು ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ತಪಾಸಣೆ ಮಾಡಿದ ನಂತರ ಭಾರತಕ್ಕೆ ಮರಳಿ ಕರೆತರಲು ಸರ್ಕಾರ ಗಮನ ಹರಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಭಾರತೀಯರನ್ನು ಪರೀಕ್ಷಿಸಲು ವೈದ್ಯಕೀಯ ತಂಡ ಗುರುವಾರ ಇಟಲಿಗೆ ತೆರಳಲಿದೆ ಎಂದು ಅವರು ಹೇಳಿದರು. ಕೊರೋನ ವೈರಸ್‌ನಿಂದಾಗಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರ ಬಗ್ಗೆ ಹೇಳಿಕೆ ನೀಡಿದ ಜೈಶಂಕರ್, ಇಟಲಿ ಮತ್ತು ಇರಾನ್‌ನ ಪರಿಸ್ಥಿತಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಸೂಕ್ತ ಪರೀಕ್ಷೆ ಮತ್ತು ತಪಾಸಣೆಯ ನಂತರ ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಈ ರೋಗವು ಸುಮಾರು 90 ದೇಶಗಳಿಗೆ ಹರಡಿದೆ ಎಂದು ಹೇಳಿದ ಜೈಶಂಕರ್, ವಿಶ್ವದಾದ್ಯಂತ ಭಾರತೀಯರನ್ನು ಮರಳಿ ಕರೆತರುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದರೆ ಅದು ಇನ್ನಷ್ಟು ಭೀತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಭಾರತವು ಚೀನಾದ ವುಹಾನ್‌ನಲ್ಲಿ ಮಾತ್ರ ಮಧ್ಯಪ್ರವೇಶಿಸಿ ಭಾರತೀಯರನ್ನು ಮರಳಿ ಕರೆತಂದಿತು ಎಂದ ಜೈಶಂಕರ್, ಇರಾನ್‌ನ ವಿವಿಧ ಪ್ರಾಂತ್ಯಗಳಲ್ಲಿ 6000ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಇದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.