ಕೊಡಗು : ಕಳೆದ ಮೂರು ವರ್ಷಗಳಿಂದಲೂ ಕೊಡಗಿನಲ್ಲಿ ಸಂಭವಿಸುತ್ತಿರುವ ಭೀಕರ ಪ್ರವಾಹ ಮತ್ತು ಭೂಕುಸಿತ ಜಿಲ್ಲೆಯ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. 2018-19 ರಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿಯುತ್ತಿದ್ದ ಮಳೆ ಸೆಪ್ಟೆಂಬರ್ ಎನ್ನುವಷ್ಟರಲ್ಲಿ ಸಂಪೂರ್ಣ ನಿಂತು ಬಿಡುತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ ಅರ್ಧ ತಿಂಗಳು ಕಳೆದರೂ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಮೂರು ದಿನಗಳಿಂದ ತಲಕಾವೇರಿ, ಬ್ರಹ್ಮಗಿರಿಬೆಟ್ಟ, ಬಾಗಮಂಡಲ, ನಾಪೋಕ್ಲು ಸೇರಿದಂತೆ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಧಾರಕಾರವಾಗಿ ಸುರಿಯುತ್ತಿದೆ. ಹೀಗೆ ಮಳೆ ಮುಂದುವರೆದಲ್ಲಿ ತ್ರಿವೇಣಿ ಸಂಗ್ರಮ ಮುಳುಗಡೆಯಾಗುವ ಸಾಧ್ಯತೆ ಇದ್ದು, ಜನರಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ. ಸ್ವಲ್ಪವೇ ಜಾಸ್ತಿ ಮಳೆ ಬಂದರೂ ಕಾವೇರಿ ಪ್ರವಾಹ ನೀರು ಮೊದಲು ನುಗ್ಗುವುದೇ ಕರಡಿಗೋಡಿನಲ್ಲಿ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಪ್ರವಾಹಸ್ಥಿತಿ ಅನುಭವಿಸಿ ಇನ್ನೂ ನಿಟ್ಟುಸಿರು ಬಿಡಲು ಆಗಿಲ್ಲ. ಆದರೆ ಮತ್ತೆ ಮಳೆ ಧಾರಕಾರವಾಗಿ ಸುರಿಯುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಇತ್ತ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ನದಿಪಾತ್ರದ ಜನರ ನೆಮ್ಮದಿ ಕಿತ್ತುಕೊಂಡಿದ್ದರೆ, ತಲಕಾವೇರಿ, ಬ್ರಹ್ಮಗಿರಿ ಬೆಟ್ಟದಲ್ಲಿ ಸುರಿಯುತ್ತಿರುವ ಮಳೆ ಕೋಳಿಕಾಡು, ಚೇರಂಗಾಲ, ಕೋರಂಗಾಲ ಸೇರಿದಂತೆ ಹಲವು ಹಳ್ಳಿಗಳ ಜನರಿಗೆ ಬೆಟ್ಟ ಕುಸಿಯುವ ಆತಂಕ ಮೂಡಿಸಿದೆ. ಒಂದು ವೇಳೆ ಈ ಬೆಟ್ಟಗಳು ಕುಸಿದಲ್ಲಿ ಚೇರಂಗಾಲ, ಕೋರಂಗಾಲ ಮತ್ತು ಕೋಳಿಕಾಡು ಗ್ರಾಮಗಳು ಸಂಪೂರ್ಣ ಅಪಾಯಕ್ಕೆ ಸಿಲುಕಲಿವೆ. ಹೀಗಾಗಿಯೇ ಮಳೆ ಜೋರಾದಂತೆ ಜನರು ಪ್ರಾಣಕೈಯಲ್ಲಿಡುದು ಬದುಕುತ್ತಿದ್ದಾರೆ.
ಒಟ್ಟಿನಲ್ಲಿ ಆಗಸ್ಟ್ ತಿಂಗಳಲ್ಲಿ ರಣಭೀಕರವಾಗಿ ಸುರಿದಿದ್ದ ಮಳೆಗೆ ಎದುರಾಗಿದ್ದ ಪ್ರವಾಹ ಮತ್ತು ಭೂಕುಸಿತಗಳು ಜನರ ಮನಸಿನಲ್ಲಿ ಹಸಿಯಾಗಿರುವಾಗಲೇ ಮತ್ತೆ ಧಾರಕಾರ ಮಳೆ ಸುರಿಯುತ್ತಿರುವುದು ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ.
https://youtu.be/aqzcsTp3v5I