ಮಂಗಳೂರು: ನಿವೃತ್ತ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಹನಿಟ್ಯ್ರಾಪ್ ಮಾಡಿ ಹಣ ದೋಚುತ್ತಿದ್ದ ಆರೋಪದಲ್ಲಿ ಇಬ್ಬರು ಯುವತಿಯರು ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇವರಿಗೆ ಮಂಗಳೂರು ನಾಲ್ಕನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 6000 ರೂಪಾಯಿ ದಂಡ ವಿಧಿಸಿದೆ.
ಕೊಣಾಜೆಯ ಶಿಲ್ಪಾ (27), ಎಲ್ಯಾರ್‌ಪದವಿನ ಅವಿನಾಶ್ (25), ಕುತ್ತರಾ ಪದವಿನ ರಂಜಿತ್(23) ಹಾಗೂ ಯತೀಶ್ (26), ದೇರಳಕಟ್ಟೆಯ ನಿತಿನ್ (23), ಕೊಣಾಜೆಯ ಶ್ರೀಜಿತ್ (24), ಬೋಂದೆಲ್‌ನ ಸಚಿನ್ (23), ಕೋಟೆಕಾರ್ ಬೀರಿಯ ತೃಪ್ತಿ (25) ಶಿಕ್ಷೆಗೊಳಗಾದ ಆರೋಪಿಗಳು.
ಮಂಗಳೂರು ನಗರದ ಬಳ್ಳಾಲ್‌ಬಾಗ್‌ನ ಶ್ರೀದೇವಿ ಕಾಲೇಜು ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ 57 ವರ್ಷದ ಬ್ಯಾಂಕ್ ಮ್ಯಾನೇಜರ್ (ಪ್ರಸ್ತುತ ನಿವೃತ್ತರು) ಅವರಿಂದ ಬ್ಯಾಂಕಿಂಗ್ ಪರೀಕ್ಷೆಯ ತರಬೇತಿ ಪಡೆಯುವ ನೆಪದಲ್ಲಿ ಶಿಲ್ಪಾ ಮ್ಯಾನೇಜರ್ ಮನೆ ಸೇರಿದ್ದಳು. ಪೂರ್ವಯೋಜನೆಯಂತೆ ಶಿಲ್ಪಾ, ಬ್ಯಾಂಕ್ ಮ್ಯಾನೇಜರ್ ಜೊತೆ ಸಲುಗೆಯಿಂದ ವರ್ತಿಸಿದ್ದಾಳೆ. ಇದನ್ನು ಇನ್ನುಳಿದವರು ಪೋಟೋ ತೆಗೆದು ಹಾಗೂ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿ ಚೂರಿ ತೋರಿಸಿ ಬೆದರಿಕೆ ಹಾಕಿ 1 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಆದ್ರೆ ಬ್ಯಾಂಕ್ ಮ್ಯಾನೇಜರ್ 90,000 ರೂಪಾಯಿ ನೀಡುವುದಾಗಿ ಒಪ್ಪಿದ್ದರು. ಆ ಬಳಿಕ ಆರೋಪಿಗಳು ಅವರ ಬ್ಯಾಂಕ್ ಚೆಕ್‌ನ ಎರಡು ಖಾಲಿ ಹಾಳೆಗಳಿಗೆ ಬಲವಂತವಾಗಿ ಸಹಿ ಹಾಕಿಸಿ, ಪುತ್ರನ ದ್ವಿಚಕ್ರ ವಾಹನದ ಆರ್‌ಸಿ ತೆಗೆದುಕೊಂಡು ಹಣ ನೀಡದಿದ್ದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪ ಮಾಡಲಾಗಿತ್ತು.
ಮ್ಯಾನೇಜರ್ ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಠಾಣೆಯ ಇನ್‌ಸ್ಪೆಕ್ಟರ್ ಕೆ. ರಾಜೇಶ್ ಪ್ರಕರಣ ದಾಖಲು ಮಾಡಿದ್ದರು. ಘಟನೆ ನಡೆದ ಆರು ದಿನಗಳ ಬಳಿಕ ಆರೋಪಿಗಳನ್ನು ಬರ್ಕೆ ಹಾಗೂ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದರು. ನಂತರ ಇನ್‌ಸ್ಪೆಕ್ಟರ್ ಕೆ.ಕೆ.ರಾಮಕೃಷ್ಣ ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಗಳನ್ನು ಕೈಗೆತ್ತಿಕೊಂಡ 4 ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ.








